ಮಲೆ ಮಹದೇಶ್ವರ ಬೆಟ್ಟಕ್ಕೆ ಇಂದಿನಿಂದ ಪಾದಯಾತ್ರೆ

29 KRN-1.
Published on

ಗುರುಲಿಂಗ ಜಂಗಮ ಮಠದ ಶ್ರೀ ನಟರಾಜ ಸ್ವಾಮೀಜಿ ವಿವರ

 ಕೆ.ಆರ್.ನಗರ : ಹುಣಸೂರು ತಾಲೂಕಿನ ಗಾವಡಗೆರೆ ಗುರುಲಿಂಗ ಜಂಗಮ ಮಠದಿಂದ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಡಿ.30 ರಿಂದ ಜ. 5ರ ವರೆಗೆ ಶಾಂತಿ, ಸೌಹಾರ್ದ ಮತ್ತು ಸದ್ಭಾವನಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಶ್ರೀ ನಟರಾಜ ಸ್ವಾಮೀಜಿ ಹೇಳಿದರು.

30ರಂದು ಗಾವಡಗೆರೆ ಮಠದಲ್ಲಿ ಪೂಜಾ ಕೈಂಕರ್ಯ ಮುಗಿಸಿ 9ನೇ ವರ್ಷದ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಮಧ್ಯಾಹ್ನ ಕೆ.ಆರ್.ನಗರ ಮಹದೇಶ್ವರ ದೇವಾಲಯ, ರಾತ್ರಿ ಲಾಳಂದೇವನಹಳ್ಳಿಯಲ್ಲಿ ತಂಗಲಾಗುವುದು ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಮಸ್ತ ಜೀವ ಸಂಕುಲಗಳಿಗೆ ಒಳಿತನ್ನು ಬಯಸಿ, ಜನರಿಗೆ ಸಾಮಾಜಿಕ ಅರಿವು ಮೂಡಿಸುವುದು ಪಾದಯಾತ್ರೆ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.

ಜ, 31ರ ಬೆಳಗ್ಗೆ ಲಾಳಂದೇವನಹಳ್ಳಿ ಗ್ರಾಮದಿಂದ ಹೊರಟು ಸಂಜೆ ಮೈಸೂರಿನ ಕನಕ ಭವನದಲ್ಲಿ ಯಾತ್ರೆ ತಂಗಲಿದೆ. ಜ, 1 ರಂದು ಮೈಸೂರಿನಿಂದ ಟಿ.ನರಸೀಪುರ, 2 ರ ರಾತ್ರಿ ಕೊಳ್ಳೇಗಾಲದ ಜೆಎಸ್‌ಎಸ್ ವಿದ್ಯಾರ್ಥಿ ನಿಲಯದಲ್ಲಿ, 3 ರಂದು ಹನೂರಿನ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಮಾಡಲಾಗುವುದು ಎಂದರು. 4 ರಂದು ಹನೂರಿನಿಂದ ತಾಳಬೆಟ್ಟ, 5 ರಂದು ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟ ತಲುಪಿ ದೇವರ ದರ್ಶನ ಪಡೆಯಲಾಗುತ್ತದೆಂದು ಸ್ವಾಮೀಜಿ ತಿಳಿಸಿದರು. ಪಾದಯಾತ್ರೆಯಲ್ಲಿ ಮೈಸೂರು ಜಿಲ್ಲೆ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಯ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ. ಮಠದ ವತಿಯಿಂದ ಎಲ್ಲರಿಗೂ ಪ್ರಸಾದ ಮತ್ತು ವಾಸ್ತವ್ಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಪುರಸಭೆ ಮಾಜಿ ಉಪಾಧ್ಯಕ್ಷೆ ನಾಗರತ್ನಮ್ಮ, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ.ರವಿಕುಮಾರ್, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಕೆಂಪರಾಜು, ಮುಖಂಡರಾದ ಸಿ.ಎನ್.ಪ್ರಭು, ಎಸ್.ಎಂ. ಗಂಗಾಧರ್, ಪ್ರಕಾಶ್, ಉಮಾಶಂಕರ, ರಾಜಶೇಖರ, ಚಂದ್ರಶೇಖರ, ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net