ಮ.ಬೆಟ್ಟದ ಪಾದಯಾತ್ರೆಗೆ ಚಾಲನೆ

04 HANUR 2
Published on

ಹನೂರು: ಸದ್ಭವ ಸೇವಾ ಸಮಿತಿ ವತಿಯಿಂದ ಹಮ್ಮಿಕೊಳ್ಳುತ್ತಿರುವ ಮಲೆಮಹದೇಶ್ವರ ಬೆಟ್ಟದ ಪಾದಯಾತ್ರೆಗೆ ಪ್ರತಿ ವರ್ಷ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಸಂತಸ ತಂದಿದೆ ಎಂದು ಸಮಿತಿ ಅಧ್ಯಕ್ಷ ಗಂಗಾಧರ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಸದ್ಭವ ಸೇವಾ ಸಮಿತಿ ವತಿಯಿಂದ ಶನಿವಾರ 19ನೇ ವರ್ಷದ ಪಾದಯಾತ್ರೆಗೆ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸೇವಾ ಸಮಿತಿ ವತಿಯಿಂದ ಕಳೆದ 19 ವರ್ಷಗಳಿಂದಲೂ ಪಟ್ಟಣದಿಂದ ಮ.ಬೆಟ್ಟಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ. ಆರಂಭದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಈಗ 3 ಸಾವಿರಕ್ಕೂ ಹೆಚ್ಚು ಭಕ್ತರು ಪಾದ ಯಾತ್ರೆ ಮೂಲಕ ದರ್ಶನಕ್ಕೆ ತೆರಳುತ್ತಿರುವುದು ಸಂತಸದ ಸಂಗತಿ ಈ ದಿಸೆಯಲ್ಲಿ ಪಾದಯಾತ್ರಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲ ಭಕ್ತರು ಆಹಾರ ಧಾನ್ಯ, ಹಣ್ಣುಹಂಪಲು ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ಉಚಿತವಾಗಿ ನೀಡುವ ಮೂಲಕ ಸಹಕಾರ ನೀಡುತ್ತಿದ್ದಾರೆ. ಮಾರ್ಗಮಧ್ಯೆ ಅಲ್ಲಲ್ಲಿ ಉಪಾಹಾರ ಮತ್ತು ಊಟದ ವ್ಯವಸ್ಥೆ ಏರ್ಪಡಿಸಲಾಗುತ್ತಿದೆ ಎಂದರು.
ಸೇವಾ ಸಮಿತಿ ಉಪಾಧ್ಯಕ್ಷ ಶಂಕರ್, ಕಾರ್ಯದರ್ಶಿ ಶಶಿ, ಖಜಾಂಚಿ ನಾರಾಯಣ್, ಉದ್ಯಮಿ ನಿಂಗಣ್ಣ, ಪದಾಧಿಕಾರಿಗಳಾದ ಕೃಷ್ಣ, ಅನಿಲ್ ಹಾಗೂ ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net