

ಕೊರಟಗೆರೆ : ರಾಜ್ಯದಲ್ಲಿ ಸಹಕಾರಿ ಸಂಘಗಳ ಆಂದೋಲನದಲ್ಲಿ ತುಮಕೂರು ಜಿಲ್ಲೆ ಮುಂಚೂಣಿಯಲ್ಲಿದ್ದು, ಸಹಕಾರಿ ಕ್ಷೇತ್ರಕ್ಕೆ ಕೆ.ಎನ್.ರಾಜಣ್ಣ ಅವರ ಕೊಡುಗೆ ಅಪಾರ ಎಂದು ಶಾಸಕ ಡಾ.ಜಿ.ಪರಮೇಶ್ವರ ಹೇಳಿದರು.
ದೊಡ್ಡಸಾಗ್ಗೆರೆ ಗ್ರಾಮದಲ್ಲಿ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಉದ್ಘಾಟನೆ ಮತ್ತು ಕೆಸಿಸಿ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದಲ್ಲಿ ಬಡ್ಡಿರಹಿತ ಸಾಲ ನೀಡುವ ಏಕೈಕ ಬ್ಯಾಂಕ್ ಜಿಲ್ಲಾ ಸಹಕಾರ ಬ್ಯಾಂಕ್. ರೈತರಿಗೆ ಬಡ್ಡಿರಹಿತ ಸಾಲ ನೀಡುವ ಆಶಯ ಹೊಂದಿರುವ ರಾಜಣ್ಣ ನಿಜವಾದ ಶೋಷಿತ ವರ್ಗಗಳ ನಾಯಕ. ಇಂತಹ ಸಹಕಾರ ರತ್ನ ಮುಂಬರುವ ದಿನಗಳಲ್ಲಿ ರಾಜ್ಯಕ್ಕೆ ಸಹಕಾರಿ ಸಚಿವರಾದರೆ ರಾಜ್ಯದ ರೈತರು, ಹೈನುಗಾರಿಕೆ, ಶೋಷಿತ ವರ್ಗದವರ ಬದುಕು ಮತ್ತಷ್ಟು ಸುಧಾರಿಸಲಿದೆ ಎಂದರು.
ಹಾವೇರಿಯಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ರೈತರಿಗೆ ಒಟ್ಟು 8.5 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದರು. ನಿಜವಾದ ರೈತ, ಬಡವ ಪರವಾಗಿ ಸೇವೆ ಮಾಡುವ ಪಕ್ಷವೆಂದರೆ ಅದು ಕಾಂಗ್ರೆಸ್ ಮಾತ್ರ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ, ಸೌಲಭ್ಯವಂಚಿತ ರೈತರಿಗಾಗಿ ಪ್ರತಿ ಗ್ರಾಪಂ ಕೇಂದ್ರದಲ್ಲಿ ಸಹಕಾರ ಸಂಘ ತೆರೆಯುವ ಕಾರ್ಯ ಡಿಸಿಸಿ ಬ್ಯಾಂಕ್ ಮಾಡುತ್ತಿದೆ. ದೊಡ್ಡಸಾಗ್ಗೆರೆಯ 334 ರೈತರಿಗೆ 1.67 ಕೋಟಿ ರೂಪಾಯಿ ಸಾಲ ನೀಡಲಾಗುತ್ತಿದ್ದು, ರೈತರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ : ರಾಜ್ಯದಲ್ಲಿ ರೈತರು ಮೃತಪಟ್ಟರೆ 1 ಲಕ್ಷ ರೂಪಾಯಿವರೆಗೆ ಸಾಲಮನ್ನಾ ಮಾಡುವ ಯೋಜನೆ ತುಮಕೂರು ಡಿಸಿಸಿ ಬ್ಯಾಂಕ್‌ನಲ್ಲಿ ಮಾತ್ರ ಇದೆ. ಬೀದಿಬದಿ ವ್ಯಾಪಾರಿಗಳಿಗೆ 10 ಸಾವಿರ ರೂಪಾಯಿ ಜಿಲ್ಲೆಯಲ್ಲಿ ಸಾಲ ನೀಡಿದ್ದೇವೆ. ರೈತರು ವ್ಯವಸಾಯದೊಂದಿಗೆ ಉಪ ಕಸುಬು ಮಾಡಿದರೆ ಒಳ್ಳೆಯದು ಎಂದು ಸಲಹೆ ನೀಡಿದ ಕೆ.ಎನ್.ರಾಜಣ್ಣ, ಬರುವ ಜೂನ್‌ನಲ್ಲಿ ಸಹಕಾರ ಸಂಘಗಳ ವ್ಯಾಪ್ತಿಯ ಎಸ್ಸಿ-ಎಸ್ಟಿ ಹೊರತುಪಡಿಸಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಬ್ಯಾಂಕ್‌ನಿಂದ ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯ ಸಹಕಾರ ಮಹಾಮಂಡಲದ ಮಾಜಿ ಅಧ್ಯಕ್ಷ ಗಂಗಣ್ಣ, ತಾಪಂ ಅಧ್ಯಕ್ಷ ರಾಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಕೋಡ್ಲಹಳ್ಳಿ ಅಶ್ವತ್ಥ್ ನಾರಾಯಣ್, ಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕ ಜಿ.ಮಹೇಶ್ ಕುಮಾರ್, ಮೇಲ್ವಿಚಾರಕರಾದ ಬೋರಣ್ಣ, ಸಿಬ್ಬಂದಿ ಕಾಂತರಾಜು, ಶ್ರೀಧರ್, ರಾಮಪ್ರಸಾದ್, ರಾಮಯ್ಯ ಮತ್ತಿತರರು ಇದ್ದರು.
ಡಾ.ಜಿ.ಪರಮೇಶ್ವರ್ ಸಜ್ಜನ ರಾಜಕಾರಣಿ ಆಗಿದ್ದು, ಜಿಲ್ಲೆಯಲ್ಲಿ ಮುಖ್ಯಮಂತ್ರಿ ಅರ್ಹತೆಯಿರುವ ಏಕೈಕ ರಾಜಕಾರಣಿಯಾಗಿದ್ದಾರೆ. ಅವರು ಸಿಎಂ ಆದರೆ ಜಿಲ್ಲೆಯ ಅಭಿವೃದ್ಧಿ ಶರವೇಗದಲ್ಲಿ ಸಾಗುತ್ತದೆ. ನಾನು ಮತ್ತು ಪರಮೇಶ್ವರ್ ಉತ್ತಮ ಸ್ನೇಹಿತರಾಗಿದ್ದು, ಮುಂಬರುವ ದಿನಗಳಲ್ಲಿ ಜನ ನಮ್ಮನ್ನು ಆಶೀರ್ವದಿಸಿದರೆ ಜಿಲ್ಲೆಗೆ ಮತ್ತು ಕ್ಷೇತ್ರಕ್ಕೆ ಉತ್ತಮವಾದ ಕೆಲಸ ಮಾಡುತ್ತೇವೆ. ಕೆ.ಎನ್.ರಾಜಣ್ಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷ