ಪಚ್ಚನಾಡಿ ತ್ಯಾಜ್ಯ ಕುಸಿತಕ್ಕೆ ನಾಲ್ಕು ವರ್ಷ, ಸಂತ್ರಸ್ತರಿಗೆ ಪೂರ್ಣ ಪರಿಹಾರ ಮರೀಚಿಕೆ

manadra
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ಪಚ್ಚನಾಡಿಯ ಮಂದಾರ ಎಂಬಲ್ಲಿ ಅವೈಜ್ಞಾನಿಕ ತ್ಯಾಜ್ಯ ರಾಶಿ ಕುಸಿದು ಹತ್ತಾರು ಮನೆ, ಕೃಷಿ ಭೂಮಿಯನ್ನು ಆಪೋಶನ ಪಡೆದ ದುರಂತಕ್ಕೆ ನಾಲ್ಕು ವರ್ಷ ಕಳೆದಿದ್ದು, ಸಂತ್ರಸ್ತರಿಗೆ ಇನ್ನೂ ಪೂರ್ಣ ಪರಿಹಾರ ಸಿಕ್ಕಿಲ್ಲ.

ಬಿರುಸಿನ ಮಳೆಯಿಂದಾಗಿ 2019ರ ಆ.2ರಂದು ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ತ್ಯಾಜ್ಯ ಹರಿಯಲು ಆರಂಭವಾಗಿತ್ತು. ಆ.6ರಂದು ಶೇ.70ರಷ್ಟು ಭಾಗಕ್ಕೆ ಹರಡಿ, 12ರ ವೇಳೆಗೆ ಮಂದಾರ ಪ್ರದೇಶದ ಸುತ್ತಲೂ ವ್ಯಾಪಿಸಿತು. ಇದರಿಂದ 27 ಕುಟುಂಬಗಳು ಮನೆ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಹಾನಗರ ಪಾಲಿಕೆ ಅಧಿಕಾರಿಗಳು ಆರಂಭದ ದಿನಗಳಲ್ಲಿ ನಿವಾಸಿಗಳಿಂದ ದಾಖಲೆಗಳನ್ನು ಸಂಗ್ರಹಿಸಿದ್ದರು. ಆದರೆ ಆಗ ಬೆಳೆ ನಷ್ಟಕ್ಕೆ ಮಾತ್ರವೇ ಪರಿಹಾರ ನೀಡಿದ್ದರು. ಮುಂದೆ ಯಾವುದೇ ಕ್ರಮ ತೆಗೆದುಕೊಳ್ಳದೆ ಇದ್ದುದನ್ನು ಗಮನಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಾನವೀಯ ನೆಲೆಯಲ್ಲಿ ಹೈಕೋರ್ಟ್ ಮೂಲಕ ಪರಿಹಾರ ಒದಗಿಸಲು ಮುಂದಾಯಿತು. 27 ಕುಟುಂಬಗಳಿಗೆ ಒಟ್ಟು 14 ಕೋಟಿ ರೂ. ಮೊತ್ತವನ್ನು ಕೆಲವು ವರ್ಷಗಳ ಹಿಂದೆ ವಿತರಿಸಲಾಗಿತ್ತು. ಆ ಬಳಿಕ ಯಾವುದೇ ಪರಿಹಾರ ವಿತರಣೆಯಾಗಿಲ್ಲ


ಪಚ್ಚನಾಡಿ ತ್ಯಾಜ್ಯ ದುರಂತದಿಂದ ಮನೆ ಕಳೆದುಕೊಂಡವರಿಗೆ ಕೃಷಿಯೇ ಪ್ರಮುಖ ಆದಾಯವಾಗಿತ್ತು. ಕೃಷಿ ಆದಾಯದಿಂದ ವರ್ಷಕ್ಕೆ ಸುಮಾರು 4 ಲಕ್ಷ ರೂ. ಆದಾಯ ಬರುತ್ತಿತ್ತು. ಆದರೆ ಆ ದುರಂತದಿಂದ ಕೃಷಿ ಭೂಮಿಯೆಲ್ಲ ತ್ಯಾಜ್ಯವೇ ಸುತ್ತುವರಿದಿದೆ. ದಾಖಲೆ ಪತ್ರದ ಹೆಸರಿನಲ್ಲಿ ಕೆಲವೊಂದು ಕುಟುಂಬ ಸದಸ್ಯರನ್ನು ಇನ್ನೂ ಅಲೆದಾಡಿಸಲಾಗುತ್ತಿದೆ. ಕೆಲವರು ತೀರ ಬಡವರಾಗಿದ್ದು, ತಕ್ಷಣವೇ ಪರಿಹಾರ ಹಣ ಬಿಡುಗಡೆ ಮಾಡಬೇಕು ಸಂತ್ರಸ್ತರು ಒತ್ತಾಯಿಸಿದ್ದಾರೆ.

ಅಂದು ಏನಾಗಿತ್ತು?
ಪಚ್ಚನಾಡಿ ತ್ಯಾಜ್ಯ ಹರಿದು ಹಲವಾರು ಮನೆ, ದೈವಸ್ಥಾನ, ನಾಗಬನದಲ್ಲಿ ತ್ಯಾಜ್ಯ ರಾಶಿ ಸುತ್ತುವರಿದಿತ್ತು. ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಿಂದ ಜರಿದು ಬಂದ ತ್ಯಾಜ್ಯ ರಾಶಿ ಮಂದಾರದ ಸುಮಾರು ಎರಡು ಕಿ.ಮೀ.ನಷ್ಟು ಉದ್ದಕ್ಕೆ ಹರಡಿದ ಕಾರಣ ಆ ವ್ಯಾಪ್ತಿಯ ಮನೆಗಳಲ್ಲಿದ್ದ ಜನರ ಬದುಕು ಬೀದಿಗೆ ಬಿದ್ದು, ಸುದೀರ್ಘ ವರ್ಷಗಳಿಂದ ನೆಲೆಸಿದ್ದ ಮನೆಯನ್ನೇ ಖಾಲಿ ಮಾಡಬೇಕಾಯಿತು. ಸುಮಾರು 5,000ಕ್ಕೂ ಅಧಿಕ ಅಡಕೆ-ತೆಂಗಿನ ಮರಗಳು ತ್ಯಾಜ್ಯ ರಾಶಿಗೆ ಆಹುತಿಯಾಗಿತ್ತು. ಕಸದ ರೌದ್ರಾವತಾರಕ್ಕೆ ಮಂದಾರವೆಂಬ ಸುಂದರ ಊರು ಬೆಚ್ಚಿ ಬಿದ್ದು, ಇದೀಗ ನಾಲ್ಕು ವರ್ಷ ಕಳೆಯುತ್ತಿದೆ. ಬಾಕ್ಸ್

ಮಳೆ ನಿಂತ ಬಳಿಕ ಬಯೋಮೈನಿಂಗ್!
ಪಚ್ಚನಾಡಿಯಲ್ಲಿ ಸುಮಾರು 9 ಲಕ್ಷ ಟನ್ ತ್ಯಾಜ್ಯ ರಾಶಿ ಬಿದ್ದಿದೆ. ಮಳೆಗಾಲದ ಕಾರಣ ಪಚ್ಚನಾಡಿಯಲ್ಲಿ ನಡೆಯುತ್ತಿರುವ ಬಯೋಮೈನಿಂಗ್ ವ್ಯವಸ್ಥೆಗೆ ವೇಗ ನೀಡಲು ಸಾಧ್ಯವಾಗುತ್ತಿಲ್ಲ. ಘಟಕದಲ್ಲಿ ತಾಂತ್ರಿಕ ಕೆಲಸ ಸಂಸ್ಥೆ ಮಾಡುತ್ತಿದೆ. ಪಚ್ಚನಾಡಿಯ ಒಂದು ಘಟಕದಲ್ಲಿ ಬಯೋಮೈನಿಂಗ್ ವ್ಯವಸ್ಥೆ ಕಾರ್ಯಾಚರಿಸುತ್ತಿತ್ತು. ಶೀಘ್ರ ಎರಡು ಹೊಸ ಘಟಕಗಳನ್ನು ಸ್ಥಾಪಿಸಲಾಗುತ್ತದೆ. ಅದರಲ್ಲಿ ಒಂದು ಘಟಕ ಮಳೆಗಾಲ ಮುಗಿದ ತಕ್ಷಣ ಆರಂಭಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ ಯಂತ್ರೋಪಕರಣ ಅಳವಡಿಸಲಾಗುತ್ತಿದೆ. ಪ್ರತಿಯೊಂದು ಘಟಕದಲ್ಲೂ ದಿನಕ್ಕೆ ಸುಮಾರು 500 ಟನ್ ತ್ಯಾಜ್ಯವನ್ನು ಬಯೋಮೈನಿಂಗ್ ವಿಧಾನದ ಮೂಲಕ ಕರಗಿಸುವ ಸಾಮರ್ಥ್ಯ ಇರಲಿದೆ. ಇದೀಗ ಮತ್ತಷ್ಟು ಘಟಕ ಸ್ಥಾಪಿಸಿದರೆ ಈ ಪ್ರಕ್ರಿಯೆಗೆ ಮತ್ತಷ್ಟು ವೇಗ ದೊರಕುವ ನಿರೀಕ್ಷೆಯಲ್ಲಿ ಮಹಾನಗರ ಪಾಲಿಕೆ ಇದೆ.

ಪಚ್ಚನಾಡಿಯಲ್ಲಿ ತ್ಯಾಜ್ಯ ಸಂತ್ರಸ್ತರಿಗೆ ಇನ್ನೂ ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿಲ್ಲ. ಈ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ. ಹಣ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅದರ ಫಾಲೋಆಪ್ ಮಾಡಲಾಗುವುದು. ಸ್ಪಂದನೆಯ ನಿರೀಕ್ಷೆಯಲ್ಲಿದ್ದೇವೆ.
ಡಾ.ವೈ.ಭರತ್ ಶೆಟ್ಟಿ, ಶಾಸಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net