

ಮಂಗಳೂರು : ಪತ್ರಿಕೋದ್ಯಮಕ್ಕೆ ಹಿಂದೆ ಗಂಭೀರತೆ ಇತ್ತು. ಪತ್ರಕರ್ತರಲ್ಲೂ ಆದರ್ಶವಿತ್ತು. ಕಾಲ ಕಳೆದಂತೆ ಪತ್ರಿಕೋದ್ಯಮದ ಸವಾಲುಗಳು ಭಿನ್ನವಾಗುತ್ತಾ ಸಾಗಿದೆ. ಈಗ ತಂತ್ರಜ್ಞಾನ ಬೆಳೆದಿದೆ ಹಿರಿಯ ಪತ್ರಕರ್ತರಿಂದ ಪ್ರೇರಣೆ ಹಾಗೂ ಮಾರ್ಗದರ್ಶನ
ಪಡೆಯದಿದ್ದರೆ ನೈಜ ಪತ್ರಕರ್ತನಾಗಲು ಸಾಧ್ಯವಿಲ್ಲ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್ ಕೆ. ಹೇಳಿದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಪ.ಗೋ. (ಪದ್ಯಾಣ ಗೋಪಾಲಕೃಷ್ಣ) ಪ್ರಶಸ್ತಿಯನ್ನು ವಿಜಯವಾಣಿಯ ಹಿರಿಯ ಉಪಸಂಪಾದಕ ರಾಜೇಶ್ ಶೆಟ್ಟಿ ದೋಟ ಅವರಿಗೆ ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಿ ಅವರು ಮಾತನಾಡಿದರು.
ಪತ್ರಿಕೋದ್ಯಮದಲ್ಲಿ ಹಿಂದಿನ ಸವಾಲುಗಳು ಹಾಗೂ ಈಗಿನ ಸವಾಲುಗಳು ಭಿನ್ನವಾಗಿವೆ. ಪದ್ಯಾಣ ಗೋಪಾಲಕೃಷ್ಣರಂತಹ ಹಿರಿಯ ಪತ್ರಕರ್ತರನ್ನು ಸ್ಮರಣೆ ಮಾಡುವ ಜತೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಕಿರಿಯ ಪತ್ರಕರ್ತರಿಗೆ ಅವರು ನಿಜವಾದ ಮಾರ್ಗದರ್ಶಕರು ಎಂದು ಬದ್ರುದ್ದೀನ್ ಕೆ. ಹೇಳಿದರು.
ವಾರ್ತಾ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಿಬ್ಬಂದಿ ವಿಶ್ವನಾಥ ಜೋಗಿ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಷಾ ಮುಖ್ಯ ಅತಿಥಿಯಾಗಿದ್ದರು. ದ.ಕ. ಜಿಲ್ಲಾ
ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಪ್ರಶಸ್ತಿಯ ತೀರ್ಪುಗಾರ ಸಮಿತಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ , ಮಂಗಳೂರು ಸ್ಮಾರ್ಟ್ ಸಿಟಿ ಮಹಾ ಪ್ರಬಂಧಕ ಅರುಣ್‌ಪ್ರಭ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ವಿಜಯ ಕೋಟ್ಯಾನ್ ಪಡು ಕಾರ್ಯಕ್ರಮ ನಿರೂಪಿಸಿದರು.
*ಪ್ರಶಸ್ತಿ ಮೊತ್ತ ಮಕ್ಕಳ ಶಿಕ್ಷಣಕ್ಕೆ
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಜೇಶ್ ಶೆಟ್ಟಿ ದೋಟ ಅವರು ಹೆಬ್ರಿ ತಾಲೂಕು ಅಂಡಾರು ಗ್ರಾಮದ ಮೊರಂಟೆಬೈಲು ಎಂಬ ಸ್ಥಳ ಮೂಲಸೌಲಭ್ಯಗಳಿಂದ ವಂಚಿತವಾಗಿರುವ ಬಗ್ಗೆ ವರದಿ ಬರೆದಿದ್ದೆ. ವರದಿ ಪ್ರಕಟಗೊಂಡ ಬಳಿಕ ಅಲ್ಲಿ ರಸ್ತೆ ನಿರ್ಮಾಣವಾಗಿದೆ. ಶಾಸಕ ಸುನೀಲ್‌ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರಶಸ್ತಿಯ ಮೊತ್ತವನ್ನು ಅಲ್ಲಿನ ಆದಿವಾಸಿ ಮಕ್ಕಳ ಶಿಕ್ಷಣಕ್ಕೆ ನೀಡಲಾಗುವುದು ಎಂದರು.
ಪ್ರಶಸ್ತಿಯ ಮೊತ್ತವನ್ನು ಎಜ್ಯು ಕಾರುಣ್ಯ ಯೋಜನೆಯ ಮುಖ್ಯಸ್ಥ ಮೋಹನದಾಸ ಮರಕಡ ಅವರಿಗೆ ಹಸ್ತಾಂತರಿಸಿದರು