

ಹುಬ್ಬಳ್ಳಿ: ಬೆಂಗಳೂರಿನ ಪಿ. ಸಿಂಘ್ವಿ ಚಾರಿಟಬಲ್ ಟ್ರಸ್ಟ್ ವತಿಯಿಂದ ನೀಡಲಾಗುತ್ತಿರುವ ಶಿಕ್ಷಾದೀಪ ವಿದ್ಯಾರ್ಥಿವೇತನವು ಮಕ್ಕಳ ಉನ್ನತ ವ್ಯಾಸಂಗಕ್ಕೆ ಬಹಳ ಸಹಕಾರಿಯಾಗಿದೆ ಎಂದು ಅಖಿಲ ಭಾರತ ವಕೀಲರ ಒಕ್ಕೂಟದ ಜಂಟಿ ಕಾರ್ಯದರ್ಶಿ ಬಸವರಾಜ ಕೋರಿಮಠ ಅಭಿಪ್ರಾಯಪಟ್ಟರು.
ಇಲ್ಲಿಯ ಎಪಿಎಂಸಿ ಆವರಣದ ಶ್ರಮಿಕ ಭವನದಲ್ಲಿ ಬೆಂಗಳೂರಿನ ಪಿ. ಸಿಂಘ್ವಿ ಚಾರಿಟಬಲ್ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ಹಮಾಲಿ ಕಾಮಿರ್ಕರ ಫೆಡರೇಶನ್ (ಸಿಐಟಿಯು) ಸಹಯೋಗದಲ್ಲಿ ಏರ್ಪಡಿಸಿದ್ದ "ಶಿಕ್ಷಾದೀಪ' ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳ ಹಾಗೂ ಪಾಲಕರ ಸಭೆಯಲ್ಲಿ ಅವರು ಅತಿಥಿಗಳಾಗಿ ಮಾತನಾಡಿದರು.
ಹಮಾಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಲವು ವರ್ಷಗಳಿಂದ ಸಂಸ್ಥೆಯು ಸಹಾಯ ಮಾಡುತ್ತಿದೆ. ಇದರ ಸದುಪಯೋಗವನ್ನು ಕಾರ್ಮಿಕರು ಪಡೆದುಕೊಳ್ಳಬೇಕೆಂದು ಹೇಳಿದರು.
ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಮಾತನಾಡಿ, ಶೈಕ್ಷಣಿಕ ಸಾಲಿನಲ್ಲಿ 548 ವಿದ್ಯಾರ್ಥಿಗಳಿಗೆ 51 ಲಕ್ಷ ರೂ. ವಿದ್ಯಾರ್ಥಿವೇತನ ಬಿಡುಗಡೆ ಮಾಡಲಾಗಿದೆ. ಮುಂದಿನ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಉಚಿತವಾಗಿ ಮಾರ್ಗದರ್ಶನ ನೀಡುವ ಯೋಜನೆ ರೂಪಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ಪಿ. ಸಿಂಘ್ವಿ ಚಾರಿಟಬಲ್ ಟ್ರಸ್ಟ್ ಸಾಮಾಜಿಕ ಕಾರ್ಯ ವಿಭಾಗದ ರಾಜ್ಯ ಸಂಯೋಜಕ ಈರಪ್ಪ ನಾಯ್ಕ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಅಸಂಘಟಿತ ವಲಯದ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಪ್ರಗತಿ ಕಾಣುತ್ತಿದ್ದೇವೆ. ಈ ಯೋಜನೆ ಬಳಸಿಕೊಂಡು ಉನ್ನತ ಹಂತದ ಅಧ್ಯಯನ ಮಾಡಿ ಬದುಕು ಕಟ್ಟಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು. ಟ್ರಸ್ಟ್ ನಿಂದ ಪದವಿಯ ನಂತರ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುವುದು. ಇದರಿಂದ ಅಸಂಟಿತ ಕಾರ್ಮಿಕರ ಮಕ್ಕಳಿಗೆ ಪ್ರಯೋಜನವಾಗಲಿದೆ ಎಂದರು.
ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳು ಪೋಷಕರೊಂದಿಗೆ ಸಂವಾದ ನಡೆಯಿತು. ಹಮಾಲಿ ಕಾರ್ಮಿಕರ ಮುಖಂಡರಾದ ಗುರುಸಿದ್ದಪ್ಪ ಅಂಬಿಗೇರ, ಮಂಜುನಾಥ ಹುಜರಾತಿ, ಬಸವಣ್ಣೆಪ್ಪ ನೀರಲಗಿ, ಹನಮಂತ ಅಂಬಿಗೇರ, ನಾರಾಯಣ ಆರೇರ, ಅಂಗನವಾಡಿ ನೌಕರರ ಮುಖಂಡರಾದ ಸಾವಿತ್ರಿ ಬಿರಾದಾರ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ನೀಲಮ್ಮ ಬಿರಾದಾರ, ವಂದನಾ ಗುಡಿಹಾಳ, ಲಕ್ಷ್ಮೀ ಮುತ್ಯಾಳ, ಚಿರಂತ ಕಂಬಾಳಿಮಠ, ಕಾವೇರಿ ಗಡಿಗೆಣ್ಣವರ, ಇಲಿಯಾಜುದ್ದೀನ ಗಂಗಾವತಿ ಹಲವರು ಭಾಗವಹಿಸಿದ್ದರು.