ಪಿ-ನಂಬರ್ ಸಮಸ್ಯೆ ಬಗೆಹರಿಸಿ, ಅಧಿಕಾರಿಗಳಿಗೆ ಶಾಸಕ ರಮೇಶ್‌ಕುಮಾರ್ ತಾಕೀತು

3-klr-2
Published on

ಕೋಲಾರ: ಶ್ರೀ ದೇವರಾಜ ಅರಸು ಜನ್ಮದಿನವಾದ ಆ. 20ರೊಳಗೆ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ 7 ಹೋಬಳಿಗಳ ರೈತ ಪಿ-ನಂಬರ್ ಸಮಸ್ಯೆ ಬಗೆಹರಿಯಬೇಕು ಮಾಜಿ ಸ್ಪೀಕರ್, ಕ್ಷೇತ್ರದ ಶಾಸಕ ಕೆ.ಆರ್. ರಮೇಶ್‌ಕುಮಾರ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇಲ್ಲಿನ ತಾಲೂಕು ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ರೈತರ ಜಮೀನುಗಳ ಪಿ-ನಂಬರ್ ಪಹಣಿಯಲ್ಲಿ ಮುಂದುವರಿದಿರುವುದು ಸಮಸ್ಯೆಯಾಗಿ ಉಳಿದಿದೆ. ಈ ನಿಟ್ಟಿನಲ್ಲಿ ತುರ್ತು ಕ್ರಮ ವಹಿಸುವ ಜತೆಗೆ ಆಗಸ್ಟ್ 20ರ ದೇವರಾಜ ಅರಸು ಜಯಂತಿಯೊಳಗೆ ಕ್ಷೇತ್ರ ಪಿ ನಂಬರ್ ಸಮಸ್ಯೆಯಿಂದ ಮುಕ್ತವಾಗಿರಬೇಕು ಎಂದು ಸೂಚಿಸಿದರು.

ಸರ್ಕಾರಿ ಜಾಗ, ಗುಂಡು ತೋಪು, ಗೋಮಾಳ ಜಾಗವನ್ನು ಸಾರ್ವಜನಿಕರ ಉದ್ದೇಶಕ್ಕೆ ಮಂಜೂರು ಮಾಡಲು ಅವಕಾಶವಿದೆ. ಸ್ಮಶಾನಕ್ಕೆ ಜಾಗ ಇಲ್ಲದ ಗ್ರಾಮ ಗುರುತಿಸಿ ಜಾಗ ಗುರುತಿಸಲು ಹಿಂದೆ ಸೂಚಿಸಿದ್ದರೂ ಇನ್ನೂ ಕೆಲ ಗ್ರಾಮಗಳಲ್ಲಿ ಬಾಕಿಯಿದೆ. ಕೂಡಲೇ ಗುರುತಿಸಿಕೊಡಬೇಕು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಹಲವು ದಶಕಗಳಿಂದ ಬಡವರು ಅನುಭವದಲ್ಲಿರುವ ಜಮೀಗೆ ಬಲಾಢ್ಯರು ದಾಖಲೆ ಸೃಷ್ಟಿಸಲು ಇಲಾಖೆಯಲ್ಲೂ ಸ್ಪಂದಿಸುತ್ತಾರೆ, ಆದ್ಯತೆ ಮೇರೆಗೆ ಭೂ ರಹಿತರಿಗೆ ಜಮೀನು ಹಂಚಬೇಕು, ಅರ್ಜಿ ಸಲ್ಲಿಸಿ ವಿಲೇವಾರಿಯಾಗದ ಪ್ರಕರಣಗಳನ್ನು ಕೂಡಲೆ ಇತ್ಯರ್ಥಪಡಿಸಿ ಅರ್ಹ ರೈತರಿಗೆ ಆಂಚೆ ಮೂಲಕ ಸಾಗುವಳಿ ಚೀಟಿ ಕಳುಹಿಸಬೇಕು ಎಂದು ತಹಸೀಲ್ದಾರ್‌ಗೆ ಸೂಚಿಸಿದರು.

ದಲ್ಲಾಳಿಗಳಿಂದ ಮುಕ್ತಿ ನೀಡಿ: ತಾಲೂಕು ಕಚೇರಿಯ ಆರೋಗ್ಯ ಕೆಟ್ಟಿದೆ. ಹಿಂದೆ ಇದ್ದವರು ದಲ್ಲಾಳಿಗಳಿಗೆ ಸಹಕಾರ ನೀಡುತ್ತಿದ್ದರು. ಈಗ ಸಮಸ್ಯೆ ಬಗೆಹರಿಯುತ್ತಿದ್ದರೂ ದಲ್ಲಾಳಿಗಳು ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲರ್ಕ್‌ಗಳಿಗೆ, ಸಿಬ್ಬಂದಿಗೆ ಚುರುಕು ಮುಟ್ಟಿಸಬೇಕು ಎಂದರು.

ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರು ಒಂದು ಪಕ್ಷ, ವ್ಯಕ್ತಿ ಎಂದು ಬೇಧ-ಭಾವ ಮಾಡದೆ ಪಕ್ಷಾತೀತ, ಜ್ಯಾತ್ಯತೀತವಾಗಿ ಕೆಲಸ ಮಾಡಬೇಕು, ಕರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಬಾಕಿ ಉಳಿದಿರುವ ರೈತರ ಕೆಲಸಗಳನ್ನು ಮುಗಿಸಿಕೊಡಿ, ಅಧಿಕಾರಿಗಳನ್ನು ದೇವರ ಸಮಾನವಾಗಿ ನೋಡಿಕೊಳ್ಳುತ್ತಾರೆ ಎಂದರು.

ತಹಸೀಲ್ದಾರ್ ಶೋಭಿತಾ ಮಾತನಾಡಿ, ಜಮೀನು ಅನುಭವದಲ್ಲಿರುವ ರೈತರ ಅರ್ಜಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲಿಸಿ ಸಾಗುವಳಿ ಚೀಟಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಹೋಳೂರು ಹೋಬಳಿಯಲ್ಲಿ ಬಾಕಿ ಇರುವ 26 ಹಾಗೂ ಸುಗಟೂರು ಹೋಬಳಿಯ 20 ಅರ್ಜಿಗಳನ್ನು ಶೀಘ್ರ ಇತ್ಯರ್ಥಪಡಿಸಲಾಗುವುದು ಎಂದರು

ಉಪ ವಿಭಾಗಾಧಿಕಾರಿ ಸೋಮಶೇಖರ್, ಭೂ ದಾಖಲೆಗಳ ವಿಭಾಗದ ಉಪ ನಿರ್ದೇಶಕ ಗೋಪಾಲಯ್ಯ, ಶ್ರೀನಿವಾಸಪುರ ತಹಸೀಲ್ದಾರ್ ಶ್ರೀನಿವಾಸ್ ಹಾಜರಿದ್ದರು.

ನಾನು ಸಹಿಸುವುದಿಲ್ಲ: 60 ವರ್ಷ ಹಾಗೂ ಮೇಲ್ಪಟ್ಟ ವಯೋವೃದ್ಧರಿಗೆ ಬರುತ್ತಿರುವ ಮಾಸಾಶನ ವಿತಣೆಯಲ್ಲಿ ತಾರತಮ್ಯ ಇದೆ. ಕೆಲವರಿಗೆ 600 ಹಾಗೂ ಇನ್ನು ಕೆಲವರಿಗೆ 1000 ರೂ. ಮೇಲ್ಪಟ್ಟು ಬರುತ್ತಿದೆ. ಎಲ್ಲರಿಗೂ ಒಂದೇ ರೀತಿ ಬರುವಂತೆ ಕಂದಾಯ ನಿರೀಕ್ಷರು ಕ್ರಮ ತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ನನಗೆ ಸಾಕಷ್ಟು ದೂರುಗಳು ಬಂದಿವೆ. ಹೀಗೆಯೇ ಮುಂದುವರಿದರೆ ನಾನು ಸಹಿಸುವುದಿಲ್ಲ ಎಂದು ರಮೇಶ್‌ಕುಮಾರ್ ಖಡಕ್ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net