ಕಾಡಾ ಅಧ್ಯಕ್ಷರಾಗಿ ಪಿ.ಮರಿಸ್ವಾಮಿ ಅಧಿಕಾರ ಸ್ವೀಕಾರ

11 A
Published on

ಮೈಸೂರು: ಕಾವೇರಿ ಅಚ್ಚುಕಟ್ಟು ಪ್ರಾಧಿಕಾರ(ಕಾಡಾ)ದ ನೂತನ ಅಧ್ಯಕ್ಷರಾಗಿ ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಸೋಮವಾರ ಅಧಿಕಾರ ಸ್ವೀಕರಿಸಿದರು.
ಕಾಂಗ್ರೆಸ್ ಮುಖಂಡರು, ತಮ್ಮ ಬೆಂಬಲಿಗರೊಂದಿಗೆ ಕಾಡಾ ಕಚೇರಿಗೆ ಆಗಮಿಸಿದ ಅವರು, ಪೂಜೆ ಸಲ್ಲಿಸಿದ ಬಳಿಕ ಅಧಿಕಾರ ಸ್ವೀಕಾರದ ವಿಧಿವಿಧಾನಗಳನ್ನು ಪೂರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಗ್ರಾಮೀಣ ಪ್ರದೇಶದ ರೈತ ಕುಟುಂಬದಿಂದ ಬಂದವನು. ರೈತರಿಗೆ ಬೇಕಾದ ಅನುಕೂಲ ಮಾಡಲು ಸಿದ್ಧನಿದ್ದೇನೆ. ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದು ಕಾಡಾ ವ್ಯಾಪ್ತಿಯಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ಗಮನಹರಿಸುತ್ತೇನೆ. ಕಾವೇರಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ನೀರಾವರಿ ಪ್ರದೇಶ ವಿಸ್ತರಣೆಗೆ ನೀರಾವರಿ ಸಚಿವರೊಂದಿಗೆ ಚರ್ಚೆ ನಡೆಸಲು ಚಿಂತನೆ ನಡೆಸಿದ್ದೇನೆ ಎಂದು ಹೇಳಿದರು.
ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಗಣೇಶ್‌ಪ್ರಸಾದ್, ಮಾಜಿ ಶಾಸಕ ಆರ್.ನರೇಂದ್ರ, ಕಾಂಗ್ರೆಸ್ ಮುಖಂಡರಾದ ಜಿ.ಎನ್. ನಂಜುಂಡಸ್ವಾಮಿ, ಕಾಗಲವಾಡಿ ಎಂ.ಶಿವಣ್ಣ, ತಾಪಂ ಮಾಜಿ ಅಧ್ಯಕ್ಷರಾದ ಬಿ.ಕೆ.ರವಿಕುಮಾರ್, ಆರ್.ಮಹದೇವು, ಜಿಪಂ ಮಾಜಿ ಸದಸ್ಯರಾದ ಸದಾಶಿವಮೂರ್ತಿ, ಕೆರೆಹಳ್ಳಿ ನವೀನ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೈಯದ್ ರಫಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net