

ಬೆಂಗಳೂರು: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಪೌರಕಾರ್ಮಿಕರು ವಾಸಿಸುವ ಕಾಲೊನಿಗೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ ಮಣಿವಣ್ಣನ್ ತೆರಳಿ ಶುಕ್ರವಾರ ಕುಂದು-ಕೊರತೆ ಆಲಿಸಿದರು.
ಕೆ.ಆರ್.ಪುರ ವಿಭಾಗದ ವಿಜ್ಞಾನನಗರ ವಾರ್ಡ್ ವ್ಯಾಪ್ತಿಗೆ ಸೇರಿದ ಪೌರಕಾರ್ಮಿಕ ಕಾಲೋನಿಗೆ ತೆರಳಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದರು. ಅಲ್ಲಿನ ಮನೆಯೊಂದರ ಬಳಿ ಚಾಪೆ ಮೇಲೆ ಕುಳಿತು ಪೌರಕಾರ್ಮಿಕರ ಅಹವಾಲನ್ನು ಸಹಾನುಭೂತಿಯಿಂದ ಕೇಳಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.
ಪ್ರಸ್ತುತ ನಗರದಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ಏನೇನು ಸಮಸ್ಯೆಗಳಿವೆ? ವೇತನ, ಇಎಸ್‌ಐ ಹಾಗೂ ಫಿಎ್ ಸರಿಯಾಗಿ ಪಾವತಿಯಾಗುತ್ತಿದೆಯೇ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರು. ಸಮಾಜ ಕಲ್ಯಾಣ ವಿಭಾಗದಡಿ ಪೌರಕಾರ್ಮಿಕರಿಗಾಗಿ ಹಲವು ಯೋಜನೆಗಳಿದ್ದು, ಆ ಎಲ್ಲ ಯೋಜನೆಗಳು ಪೌರಕಾರ್ಮಿಕರಿಗೆ ತಲುಪುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಅಂದಾಜು 1,700 ಪೌರಕಾರ್ಮಿಕರು ನೇರ ವೇತನದಡಿ ಕಾರ್ಯನಿರ್ವಹಿಸುತ್ತಿದ್ದು, ಖಾಯಂ ಮಾಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಮಹದೇವಪುರ ವಲಯದ ಜಂಟಿ ಆಯುಕ್ತೆ ದಾಕ್ಷಾಯಿಣಿ, ನೇರ ವೇತನ ಪೌರಕಾರ್ಮಿಕರ ಅರ್ಜಿಗಳನ್ನು ಪಾಲಿಕೆ ಘನತ್ಯಾಜ್ಯ ವಿಭಾಗಕ್ಕೆ ಸಲ್ಲಿಸಲಾಗಿದೆ. ಅಲ್ಲಿಂದ ಒಪ್ಪಿಗೆ ಪಡೆದ ಬಳಿಕ ಮುಂದಿನ ಹಂತದ ಕೆಲಸ ನಿರ್ವಹಿಸಲಾಗುವುದು ಎಂದರು.
ಮನೆ ನಿಮರ್ನಿಸಿಕೊಡಲು ಮನವಿ:
ಕಾಲೋನಿಯಲ್ಲಿ ವಾಸಿಸುವ ಪೌರಕಾರ್ಮಿಕರು ಮನೆಗಳನ್ನು ನಿರ್ಮಾಣ ಮಾಡಿಕೊಡಲು ಮನವಿ ಮಾಡಿದರು. ಹಲವು ವರ್ಷಗಳಿಂದ ಇಲ್ಲೇ ನೆಲೆಸಿದ್ದರೂ ಸ್ವಂತ ಸೂರು ಇಲ್ಲ. ಇದರಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದರು. ಈ ವಿಚಾರವಾಗಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮಣಿವಣ್ಣನ್ ತಿಳಿಸಿದರು.
ಈ ವೇಳೆ ಪಾಲಿಕೆಯ ಉಪ ಆಯುಕ್ತ ಮಧು, ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀನಿಧಿ, ಸಫಾಯಿ ಕರ್ಮಾಚಾರಿ ಆಯೋಗದ ಅಧಿಕಾರಿಗಳು ಉಪಸ್ಥಿತರಿದ್ದರು.