ಪಿ.ಎಂ.ವಿಶ್ವಕರ್ಮ ಯೋಜನೆ ಅರ್ಹರು ಸದುಪಯೋಗಪಡೆಯಿರಿ: ಬಿ.ಎನ್.ವೀಣಾ

adc veena
Published on

ಮಡಿಕೇರಿ: ಪಿ.ಎಂ.ವಿಶ್ವಕರ್ಮ ಯೋಜನೆ ಅರ್ಹರು ಸದುಪಯೋಗಪಡೆಯುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಹೇಳಿದರು.


ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮಂತ್ರಾಲಯ, ಮಂಗಳೂರು ಭಾರತ ಸರ್ಕಾರದ ಅಧೀನದಲ್ಲಿ ನಗರದ ಕೈಗಾರಿಕಾ ಬಡಾವಣೆಯಲ್ಲಿ ಗುರುವಾರ ನಡೆದ ಒಂದು ದಿನದ ಪಿ.ಎಂ.ವಿಶ್ವಕರ್ಮ ಯೋಜನೆಯ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.


ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಪಿ.ಎಂ.ವಿಶ್ವಕರ್ಮ ಯೋಜನೆಯು ನಗರ/ ಗ್ರಾಮೀಣ ಪ್ರದೇಶದ ಸಾಂಪ್ರ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲ ಜನರನ್ನು ಬೆಂಬಲಿಸುತ್ತದೆ. ಈ ಯೋಜನೆಯು ಮೊದಲ ಹಂತದ ೧೮ ಸಾಂಪ್ರದಾಯಿಕ ವೃತ್ತಿಗಳು ಬಡಗಿ, ದೋಣಿ ತಯಾರಕರು, ಆರ್ಮರ್, ಕಮ್ಮಾರ ಮತ್ತು ಟೂಲ್ ಕಿಟ್ ಮೇಕರ್, ಸುತ್ತಿಗೆ ಮತ್ತು ಟೂಲ್ ಕಿಟ್ ಮೇಕರ್, ಬೀಗ ತಯಾರಕರು, ಚಿನ್ನ ಬೆಳ್ಳಿ ತಯಾರಕರು, ಮಡಿಕೆ ತಯಾರಕರು, ಶಿಲ್ಪಿಗಳು, ಚಮ್ಮಾರರು, ರಾಜ ಮೇಸ್ತ್ರೀ, ಬುಟ್ಟಿ, ಚಾಪೆ, ಪೊರಕೆ ಮತ್ತು ತೆಂಗಿನ ನಾರಿನ ನೇಕಾರರು, ಗೊಂಬೆ ತಯಾರಕರು, ಕ್ಷೌರಿಕರು, ಹೂ ಮಾಲೆ ಮಾಡುವವರು, ದೋಭಿ, ಟೈಲರ್, ಮೀನು ಬಲೆ ಹೆಣೆಯುವವರು ಹೀಗೆ ಹಲವರಿಗೆ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ವಿವರಿಸಿದರು.


ಕರಕುಶಲ ಕರ್ಮಿಗಳಿಗೆ ಪ್ರಧಾನಮಂತ್ರಿ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಗುರತಿನ ಚೀಟಿಯೊಂದಿಗೆ ಮಾನ್ಯತೆ ನೀಡಲಾಗುತ್ತದೆ. ಕೌಶಲ್ಯ, ಉನ್ನತೀಕರಣ, ಟೂಲ್ ಕಿಟ್ ಪ್ರೋತ್ಸಾಹ, ಡಿಜಿಟಲ್ ವಹಿವಾಟು ಮತ್ತು ಮಾರ್ಕೆಟಿಂಗ್ ಬೆಂಬಲವನ್ನು ಒದಗಿಸುತ್ತದೆ. ಕ್ರೇಡಿಟ್ ಬೆಂಬಲವನ್ನು ೫% ರಿಯಾಯಿತಿ ಬಡ್ಡಿಯ ದರದಲ್ಲಿ ೧ ಲಕ್ಷ(ಒಂದನೇ ಕಂತು) ಮತ್ತು ೨ ಲಕ್ಷ (೨ನೇ ಕಂತು) ಪ್ರೋತ್ಸಾಹವನ್ನು ಒದಗಿಸುತ್ತದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕುಶಲಕರ್ಮಿಗಳು, ಟೈಲರ್‌ಗಳು ಇವರುಗಳು ಈ ಯೋಜನೆಯಡಿಯಲ್ಲಿ ನೋಂದಾಯಿಸಿ ಯೋಜನೆಯ ಪ್ರಯೋಜನವನ್ನು ಪ್ರತಿಯೊಂದು ಕುಶಲಕರ್ಮಿಗಳು ಸದುಪಯೋಗ ಪಡೆದುಕೊಳ್ಳುವಂತಾಗಬೇಕು ಎಂದು ತಿಳಿಸಿದರು.


ಮಂಗಳೂರು, ಎಂಎಸ್‌ಎಂಇ. ಡಿ.ಎಫ್.ಒ, ಜಂಟಿ ನಿರ್ದೇಶಕ ಕೆ.ದೇವರಾಜ್ ಮಾತನಾಡಿ, ಯೋಜನೆಯ ಲಾಭ ಪಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ.ದಿನೇಶ್‌ರವರು ಯೋಜನೆಯ ಅನುಷ್ಠಾನದ ಸ್ಥಿತಿಗತಿಗಳ ಬಗ್ಗೆ ತಿಳಿಸಿದರು.


ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಗಂಗಾಧರ್ ನಾಯಕ್, ಲೀಡ್ ಬ್ಯಾಂಕ್‌ನ ದಯಾವತಿಯವರು ಹಣಕಾಸಿನ ಶಿಸ್ತಿನ ಬಗ್ಗೆ, ಯೋಜನೆಗೆ ಸಂಬಂಧಿಸಿದಂತೆ ಸಾಲ ಬಿಡುಗಡೆಗಾಗಿ ದಾಖಲಾತಿಗಳನ್ನು ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುವುದರ ಬಗ್ಗೆ ತಿಳಿಸಿದರು.


ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಜಿಲ್ಲಾ ಸಂಯೋಜಕ ರವಿಕುಮಾರ್, ಸಾಮಾನ್ಯ ಸೇವಾ ಕೇಂದ್ರದ ಮನೋಜ್, ಜೆಮ್ ಪೋರ್ಟಲ್‌ನ ಸಂಯೋಜಕಿ ಅನುಪಮಾ, ಮಂಗಳೂರು ಸಹಾಯಕ ನಿರ್ದೇಶಕಿ ಸುಮನ್ ಎಸ್.ರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net