ಸೋಂಕಿತ ಗ್ರಾಮಗಳಿಗೆ ಪಿ.ಹೇಮಲತಾ ಭೇಟಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಿಂದ ಪರಿಶೀಲನೆ, ಸೀಲ್‌ಡೌನ್ ಕಟ್ಟುನಿಟ್ಟಿನ ಪಾಲನೆಗೆ ತಾಕೀತು

30..4.2020 news photo (17)
Published on

ಬೆಂಗಳೂರು/ನಂದಗುಡಿ: ಸಾರ್ವಜನಿಕರು ಅನವಶ್ಯಕವಾಗಿ ತಿರುಗಾಡದೆ, ಸರ್ಕಾರದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕರೊನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಹಾಗೂ ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಹೇಮಲತಾ ಸೂಚಿಸಿದರು.

ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ಬೈಲನರಸಾಪುರ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಕರೊನಾ ನಿಯಂತ್ರಣದ ಬಗ್ಗೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು. ಜಿಲ್ಲಾಡಳಿತ ನೀಡುತ್ತಿರುವ ಸೌಕರ್ಯ ಸದ್ಬಳಕೆ ಮಾಡಿಕೊಂಡು ಕರೊನಾ ಹರಡದಂತೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕೋಡಿಪಾಳ್ಯಕ್ಕೆ ಭೇಟಿ: ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿಯ ಗಾರುಡಿಗರಪಾಳ್ಯ(ಕೋಡಿಪಾಳ್ಯ) ಗ್ರಾಮಕ್ಕೆ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು. ಬೈಲನರಸಾಪುರ ಹಾಗೂ ಕೋಡಿಪಾಳ್ಯವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದ್ದು, ಗ್ರಾಮಸ್ಥರಿಗೆ ಯಾವುದೆ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ನಿಗಾ ವಹಿಸಲು ಸೂಚನೆ: ಬೈಲನರಸಾಪುರ ಮತ್ತು ಕೋಡಿಪಾಳ್ಯದಲ್ಲಿ ಸೀಲ್‌ಡೌನ್ ವ್ಯವಸ್ಥೆ ಕಟ್ಟುನಿಟ್ಟಾಗಿರಬೇಕು. ಈಗಾಗಲೇ ಸೋಂಕಿನಿಂದ ಗುಣಮುಖರಾದ ಐವರು ಹಾಗೂ ಸಂಪರ್ಕಿತ ವ್ಯಕ್ತಿಗಳನ್ನು 14 ದಿನಗಳ ಕ್ವಾರಂಟೆನ್‌ನಿಂದ ಬಿಡುಗಡೆಗೊಳಿಸಲಾಗಿದೆ. ಇವರೆಲ್ಲರನ್ನು ಹೋಂ ಕ್ವಾರಂಟೇನ್‌ನಲ್ಲಿರಿಸಿ ನಿಗಾವಹಿಸಬೇಕು ಎಂದು ಹೇಮಲತಾ ಸೂಚಿಸಿದರು.

ಜಿಪಂ ಸಿಇಒ ಎನ್.ಎಂ.ನಾಗರಾಜ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ .ವಿ.ಜೆ. ಸಜಿತ್ ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ಮಂಜುನಾಥ್, ಹೊಸಕೋಟೆ ತಹಸೀಲ್ದಾರ್ ಗೀತಾ ಮತ್ತಿತರಿದ್ದರು.

ವಿಶೇಷಾಧಿಕಾರಿಗಳ ನೇಮಕ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ಗ್ರಾಮಸ್ಥರಿಗೆ ಪ್ರತ್ಯೇಕ ಬ್ಯಾಂಕಿಂಗ್ ವ್ಯವಸ್ಥೆ ಸೇರಿ ಎಲ್ಲಾ ಮೂಲ ಸೌಕರ್ಯ ಒದಗಿಸಲಾಗುತ್ತಿದೆ. ಗ್ರಾಮದೊಳಗೆ ಅಥವಾ ಹೊರಗೆ ಪ್ರವೇಶ ನಿಷೇಧಿಸಲಾಗಿದೆ. ಬೈಲನರಸಾಪುರಕ್ಕೆ ದೊಡ್ಡಬಳ್ಳಾಪುರ ಉಪ ವಿಭಾಗದ ಉಪ ವಿಭಾಗಾಧಿಕಾರಿ ಮಂಜುನಾಥ್ ಹಾಗೂ ದೊಡ್ಡಬಳ್ಳಾಪುರ ತಹಸೀಲ್ದಾರ್ ಶಿವರಾಜುರನ್ನು ವಿಶೇಷಾಧಿಕಾರಿಯಾಗಿ ನೇಮಿಸಲಾಗಿದ್ದು, ಅವರು ಗ್ರಾಮದ ಸಂಪೂರ್ಣ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net