ಹನೂರು: ತಾಲೂಕಿನ ಒಡೆಯರಪಾಳ್ಯದಿಂದ ಹುತ್ತೂರು ಮಾರ್ಗವಾಗಿ ಪಿ.ಜಿ.ಪಾಳ್ಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಿದೆ.
ಒಡೆಯರಪಾಳ್ಯದಿಂದ ಪಿ.ಜಿ. ಪಾಳ್ಯಕ್ಕೆ 5 ಕಿಮೀ ಅಂತರವಿದ್ದು, ಈ ಮಾರ್ಗದ ರಸ್ತೆಯನ್ನು 2 ದಶಕದ ಹಿಂದೆ ನಿರ್ಮಿಸಲಾಗಿತ್ತು. ಐದಾರು ವರ್ಷದ ಹಿಂದೆಯೇ ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸವಾರರು ಈ ಮಾರ್ಗದಲ್ಲಿ ಸಂಚರಿಸಲು ತೊಂದರೆ ಎದುರಾಗಿದೆ. ರಸ್ತೆ ದುರಸ್ತಿಪಡಿಸುವಂತೆ ಸಾರ್ವಜನಿಕರು ಆಗಾಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಹಿನ್ನೆಲೆಯಲ್ಲಿ 3 ವರ್ಷದ ಹಿಂದೆ ಒಡೆಯರಪಾಳ್ಯದಿಂದ ಹುತ್ತೂರಿನವರೆಗೆ ರಸ್ತೆ ಅಭಿವೃದ್ಧಿಪಡಿಸಲಾಗಿತ್ತು. ಇನ್ನುಳಿದ ರಸ್ತೆಯನ್ನು ಹಾಗೆಯೇ ಬಿಡಲಾಗಿತ್ತು. ಇದರಿಂದಾಗಿ ಇತ್ತೀಚೆಗೆ ಬಹುತೇಕ ಕಡೆಗಳಲ್ಲಿ ಗುಂಡಿ ನಿರ್ಮಾಣವಾಗಿದೆ.
ಜಲ್ಲಿಕಲ್ಲುಗಳು ರಸ್ತೆಯ ಇಕ್ಕೆಲಗಳಲ್ಲಿ ಹರಡಿಕೊಂಡಿರುವುದು ಒಂದೆಡೆಯಾದರೆ, ಕೆಲವು ಕಡೆಗಳಲ್ಲಿ ಡಾಂಬರು ಸಂಪೂರ್ಣ ಕಿತ್ತು ಬಂದಿದೆ. ಬೈಕ್ ಸವಾರರು ಕಲ್ಲು ಹಾಗೂ ಗುಂಡಿಗಳನ್ನು ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದು ಗಾಯಗೊಳ್ಳುತ್ತಿರುವ ಘಟನೆಗಳು ನಡೆಯುತ್ತಲೇ ಇದೆ. ಇತ್ತ ಮಳೆ ಬಂದ ವೇಳೆ ಗುಂಡಿಗಳಲ್ಲಿ ನೀರು ನಿಲ್ಲುತ್ತಿದ್ದು, ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದೆ. ಕೆಲವು ಕಡೆಗಳಲ್ಲಿ ಬೈಕ್ ಸವಾರರು ರಸ್ತೆ ಬಿಟ್ಟು ಬದಿಯಲ್ಲಿ ಸಂಚರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೂ ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸದಿರುವುದು ವಿಪರ್ಯಾಸ. 3 ವರ್ಷದ ಹಿಂದೆ ಒಡೆಯರಪಾಳ್ಯದಿಂದ ಹುತ್ತೂರಿನವರೆಗೆ 1 ಕಿಮೀ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ ಒಂದು ವರ್ಷದಿಂದೀಚೆಗೆ ಅಲ್ಲಲ್ಲಿ ಡಾಂಬರು ಕಿತ್ತು ಬಂದಿದ್ದು, ಗುಂಡಿಗಳು ನಿರ್ಮಾಣವಾಗಿದೆ. ಇದರಿಂದಾಗಿ ರಸ್ತೆ ಕಾಮಗಾರಿ ಕಳಪೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.
ಹಾಳಾಗಿರುವ ಕಿರು ಸೇತುವೆ
ಪಿ.ಜಿ. ಪಾಳ್ಯದ ಬಳಿ ರಸ್ತೆ ಮಟ್ಟದ ಕಿರು ಸೇತುವೆ ನಿರ್ಮಿಸಲಾಗಿದ್ದು, ನಾಲ್ಕೈದು ವರ್ಷದ ಹಿಂದೆಯೇ ಸಂಪೂರ್ಣ ಹದಗೆಟ್ಟಿದೆ. ಇದರಿಂದಾಗಿ ಮಳೆಗಾಲದಲ್ಲಿ ನೀರು ಸೇತುವೆ ಮೇಲೆ ಹಾಗೂ ಇಕ್ಕೆಲಗಳಲ್ಲಿ ಹರಿಯುತ್ತದೆ. ಇದರಿಂದ ಸಂಚಾರಕ್ಕೆ ತೊಂದರೆಯುಂಟಾಗಿದೆ. ಸೇತುವೆ ನಿರ್ಮಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಸಂಬಂಧಪಟ್ಟವರು ಕಿಂಚಿತ್ತೂ ಗಮನಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.
ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ರಸ್ತೆಯನ್ನು ಅಭಿವೃದ್ಧಿ ಪಡಿಸುವುದರ ಜತೆಗೆ ಸೇತುವೆಯನ್ನೂ ನಿರ್ಮಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಮಾರ್ಗದ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ರಸ್ತೆ ನಿರ್ಮಿಸುವಂತೆ ಸಂಬಂಧಪಟ್ಟವರಲ್ಲಿ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪರಿಣಾಮ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಬೇಕಾದರೆ ಸರ್ಕಸ್ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಮಹೇಶ್‌ಕುಮಾರ್ ಗ್ರಾಮಸ್ಥ, ಹುತ್ತೂರು ತಾಲೂಕಿನ ಕೆಲವು ರಸ್ತೆಗಳು ತೀವ್ರ ಹದಗೆಟ್ಟಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಈಗಾಗಲೇ ಪಟ್ಟಿ ಮಾಡಿ ಕ್ರಿಯಾಯೋಜನೆ ತಯಾರಿಸಲಾಗಿದ್ದು, ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಅಗತ್ಯ ಕ್ರಮ ವಹಿಸಲಾಗಿದೆ.ರಾಜೇಶ್ ಮುನ್ಸಿ, ಎಇಇ ಪಿಡಬ್ಲುೃಡಿ ಇಲಾಖೆ