

ಮಂಡ್ಯ: ಶೈಕ್ಷಣಿಕ ಚಟುವಟಿಕೆಯ ಜತೆಗೆ ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡುವ ಮೂಲಕ ದೇಶದಲ್ಲಿಯೇ ಪ್ರಖ್ಯಾತಿ ಪಡೆದಿರುವ ನಗರದ ಪ್ರತಿಷ್ಠಿತ ಪಿಇಟಿ ಸಂಸ್ಥೆಯು ಬ್ಯಾಡ್ಮಿಂಟನ್ ಆಟಗಾರರಿಗಾಗಿ ತಮ್ಮ ಒಳಾಂಗಣ ಕ್ರೀಡಾಂಗಣದಲ್ಲಿರುವ ಅಂಕಣವನ್ನು ಹೈಟೆಕ್ ಮಾಡಿದೆ. ಇದರೊಂದಿಗೆ ರಾಜ್ಯದಲ್ಲಿಯೇ ಟಾಪ್ ಎನ್ನಿಸಿಕೊಂಡ ಸಿಂಥೆಟಿಕ್ ಅಂಕಣವನ್ನು ಹೊಂದಿರುವ ಸಂಸ್ಥೆಗಳ ಸಾಲಿಗೆ ಇದೀಗ ಪಿಇಟಿ ಸೇರ್ಪಡೆಗೊಂಡಿದೆ.
ಸುಮಾರು 40 ಲಕ್ಷ ರೂ ವೆಚ್ಚದಲ್ಲಿ ಅತ್ಯಾಧುನಿಕ ಬೆಳಕಿನ ವ್ಯವಸ್ಥೆಯೊಂದಿಗೆ 6 ಉಡನ್, ಸಿಂಥೆಟಿಕ್ ಬ್ಯಾಡ್ಮಿಂಟನ್ ಅಂಕಣಗಳನ್ನು ಉನ್ನತ ದರ್ಜೆಗೆ ನವೀಕರಿಸಲಾಗಿದೆ. ಕ್ರೀಡಾಂಗಣಕ್ಕೆ ಬಿಡಬ್ಲ್ಯುಎಫ್ ವರ್ಲ್ಡ್ ಚಾಂಂಪಿಯನ್‌ಶಿಪ್ 2022-25ರ ಅಧಿಕೃತ ಫ್ಲೋರಿಂಗ್ ಪೂರೈಕೆದಾರ ಯೋನೆಕ್ಸ್‌ರವರ ಮ್ಯಾಟ್ ಅಳವಡಿಸಲಾಗಿದೆ. ಇದು 15 ರಿಂದ 20 ವರ್ಷ ಬಾಳಿಕೆ ಬರುತ್ತದೆ. ಇದಲ್ಲದೆ ನಿರ್ದಿಷ್ಟವಾಗಿ ಒಳ ಕ್ರೀಡಾಂಗಣಕ್ಕಾಗಿಯೇ ಅಭಿವೃದ್ಧಿಪಡಿಸಿರುವ ಹಾಗೂ ಕಣ್ಣಿಗೆ ತಂಪಾಗಿರುವ 150 ವ್ಯಾಟ್ ಸಾಮರ್ಥ್ಯದ 48 ಪ್ಯಾನೆಲ್ ಲೈಟ್‌ಗಳನ್ನು ಅಳವಡಿಸಲಾಗಿದೆ. ಸರಾಸರಿ 400 ಎಲ್‌ಯುಎಕ್ಸ್ ಬೆಳಕಿನ ಸಾಂದ್ರತೆಯನ್ನು ನಿರ್ವಹಿಸುವ ಬೆಳಕಿನ ತಂತ್ರಜ್ಞಾನವನ್ನು ಜೋಡಿಸಲಾಗಿದೆ.
ಹೈಟೆಕ್ ಬ್ಯಾಡ್ಮಿಂಟನ್ ಅಂಕಣವನ್ನು ಸೋಮವಾರ ಲೋಕಾರ್ಪಣೆಗೊಳಿಸಿದ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ವಿಜಯ್‌ಆನಂದ್, ಇಂತಹ ಆಧುನಿಕ ಸೌಲಭ್ಯವನ್ನು ಹೊಂದಿರುವ ರಾಜ್ಯದ ಟಾಪ್ ಐದರೊಳಗಿನ ಹಾಗೂ ಜಿಲ್ಲೆಯ ಪ್ರಥಮ ಒಳಾಂಗಣ ಕ್ರೀಡಾಂಗಣವೆಂಬ ಹಿರಿಮೆಗೆ ಪಿಇಟಿ ಬ್ಯಾಡ್ಮಿಂಟನ್ ಅಂಕಣ ಪಾತ್ರವಾಗಿದೆ. ಇದರೊಂದಿಗೆ ಬಹಳ ವರ್ಷಗಳ ಕನಸು ಈಗ ಈಡೇರಿದಂತಾಗಿದೆ. ಈ ಸೌಲಭ್ಯವನ್ನು ಬ್ಯಾಡ್ಮಿಂಟನ್ ಕ್ರೀಡಾಂಗಣದ ಸದಸ್ಯರು, ಕ್ರೀಡಾಸಕ್ತರು, ಯುವ ಕ್ರೀಡಾಪಟುಗಳು ಸದುಪಯೋಗಪಡಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಕೀರ್ತಿ ಗಳಿಸುವಂತಾಗಲಿ ಎಂದರು.
ಪಿಇಟಿ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ನಿರ್ದೇಶಕ ಡಾ.ರಾಮಲಿಂಗಯ್ಯ ಸೇರಿದಂತೆ ಸಂಸ್ಥೆಯ ಎಲ್ಲ ಟ್ರಸ್ಟಿಗಳು ಉಪಸ್ಥಿತರಿದ್ದರು.