ಪ.ಜಾತಿ-ಪಂಗಡದ ಹಕ್ಕುಗಳ ರಕ್ಷಣೆಗೆ ಜಾಗೃತಿ ಸಭೆ

15 NMG 01
Published on

ನಾಗಮಂಗಲ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹಕ್ಕುಗಳನ್ನು ರಕ್ಷಿಸಲು ಹಾಗೂ ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸಲು ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಜಾಗೃತಿ ಸಭೆಯನ್ನು ಆಯೋಜಿಸಲಾಗುವುದು ಡಿವೈಎಸ್ಪಿ ಲಕ್ಷ್ಮೀನಾರಾಯಣಪ್ರಸಾದ್ ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಪೊಲೀಸ್ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ.ಜಾತಿ ಮತ್ತು ಪಂಗಡಗಳ ಹಕ್ಕುಗಳಿಗೆ ಚ್ಯುತಿಬಾರದಂತೆ ಕ್ರಮವಹಿಸಲಾಗುವುದು. ಸಮುದಾಯದವರ ಮೇಲೆ ದೌರ್ಜನ್ಯಗಳು ಇತ್ತೀಚೆಗೆ ಕಡಿಮೆಯಾಗಿದ್ದು, ಮುಖಂಡರು ಸ್ಥಳೀಯವಾಗಿಯೇ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದ್ದಾರೆ. ಮಿತಿಮೀರಿದ ಸಂದರ್ಭದಲ್ಲಿ ನಮ್ಮ ಹಂತಕ್ಕೆ ಬರುತ್ತಿವೆ ಎಂದರು.

ತಾಲೂಕಿನಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಿವಿಲ್ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದು, ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮವಹಿಸಲಾಗುತ್ತಿದೆ. ಕೆಲವು ಮಾಹಿತಿಗಳನ್ನು ಸಂಬಂಧಿಸಿದ ಇಲಾಖೆಯಿಂದ ಪಡೆದು ಕ್ರಮಜರುಗಿಸಬೇಕಿದ್ದು, ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದರು.

ಒತ್ತಾಯ: ಆದಿಚುಂಚನಗಿರಿ ಕ್ಷೇತ್ರದ ಮಹಾದ್ವಾರದ ಬಳಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಪಾರ್ಕಿಂಗ್ ಮಾಡಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಅಕ್ರಮ ಮದ್ಯ ಮಾರಾಟ ನಿಯಂತ್ರಿಸಬೇಕು. ಅಕ್ರಮವಾಗಿ ಗೋವುಗಳ ಸಾಗಣೆ ತಪಾಸಣೆ ನೆಪದಲ್ಲಿ ನಿಜವಾದ ರೈತರಿಗೆ ತೊಂದರೆ ನೀಡುವುದನ್ನು ನಿಲ್ಲಿಸಬೇಕು ಎಂದು ದಲಿತ ಸಮುದಾಯದ ಮುಖಂಡರು ಸಭೆಯಲ್ಲಿ ಒತ್ತಾಯಿಸಿದರು.

ಸಭೆಯಲ್ಲಿ ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಶೋಕ್‌ಕುಮಾರ್, ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ರವಿಕುಮಾರ್, ಬಿಂಡಿಗನವಿಲೆ ಪಿಎಸ್ಸೈ ರಾಜೇಂದ್ರ, ಬೆಳ್ಳೂರು ಪಿಎಸ್ಸೈ ಬಸವರಾಜ ಚಿಂಚೋಳಿ, ಮುಖಂಡರಾದ ನಾಗರಾಜಯ್ಯ, ವೆಂಕಟೇಶ್, ಸ್ವಾಮಿ, ಶಿವಣ್ಣ, ಮುತ್ತಣ್ಣ, ಲೋಹಿತ್, ಚಂದ್ರು ಮತ್ತಿತರಿದ್ದರು.

ಕ್ಷೌರ ಮಾಡಲು ನಿರಾಕರಣೆ: ದಸಂಸ ಮುಖಂಡ ಕಂಚಿನಕೋಟೆ ಮೂರ್ತಿ ಮಾತನಾಡಿ, ದೇವಲಾಪುರ ಹೋಬಳಿಯ ಮದನಹಟ್ಟಿ ಗ್ರಾಮದಲ್ಲಿ ದಲಿತ ಸಮುದಾಯದವರಿಗೆ ಕ್ಷೌರ ಮಾಡಲು ನಿರಾಕರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ದೂರಿದರು.
ಇದಕ್ಕೆ ಉತ್ತರಿಸಿದ ಗ್ರಾಮಾಂತರ ಠಾಣೆ ಪಿಎಸ್‌ಐ ರವಿಕುಮಾರ್, ವಿಡಿಯೋ ವೈರಲ್ ಆದ ಒಂದು ಗಂಟೆಯೊಳಗೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದೇನೆ. ವಿಡಿಯೋದಲ್ಲಿದ್ದ ಎರಡು ಸಮುದಾಯದವರನ್ನು ವಿಚಾರಣೆ ನಡೆಸಿದೆ. ಸ್ಥಳೀಯವಾಗಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದು ನಿಂದನೆಗೊಳಗಾಗಿದ್ದ ವ್ಯಕ್ತಿ ಹೇಳಿದ್ದಾರೆ. ಒಂದು ವೇಳೆ ಬಗೆಹರಿಸಿಕೊಳ್ಳದಿದ್ದರೆ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಸತ್ಯಾಸತ್ಯತೆ ಪರಿಶೀಲಿಸಿ: ಹಿರಿಯ ಮುಖಂಡ ಮುಳುಕಟ್ಟೆ ಶಿವರಾಮಯ್ಯ ಮಾತನಾಡಿ, ತಾಲೂಕಿನಲ್ಲಿ ದಾಖಲಾಗಿರುವ ಶೇ.90ರಷ್ಟು ಪ್ರಕರಣಗಳು ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಜಾತಿ ನಿಂದನೆ ಪ್ರಕರಣಗಳು ದಾಖಲಾಗಿವೆ. ಇದಕ್ಕೆ ಕಾರಣ ಪೊಲೀಸ್ ಇಲಾಖೆಯಲ್ಲ. ಬದಲಿಗೆ ಕಂದಾಯ ಇಲಾಖೆಯ ಲೋಪವಾಗಿದೆ. ಜಾತಿ ನಿಂದನೆ ಪ್ರಕರಣ ದಾಖಲಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದು ದಲಿತರ ಉದ್ದೇಶವಲ್ಲ. ಮೇಲ್ವರ್ಗದವರ ದಬ್ಬಾಳಿಕೆಯಿಂದ ನಮ್ಮ ಸಮುದಾಯದವರ ಜಮೀನು ಕಬಳಿಕೆಯಾಗುತ್ತಿರುವುದರ ವಿರುದ್ಧವಷ್ಟೇ ನಮ್ಮ ಧ್ವನಿಯಾಗಿದೆ. ಜಾತಿ ನಿಂದನೆ ಪ್ರಕರಣಗಳಿಗೆ ಇತ್ತೀಚೆಗೆ ಪ್ರತಿದೂರು ಪ್ರಕರಣ ದಾಖಲಾಗುತ್ತಿದ್ದು, ಪೊಲೀಸರು ಸತ್ಯಾಸತ್ಯತೆ ಪರಿಶೀಲಿಸಿ ಕಾನೂನು ಕ್ರಮಜರುಗಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net