

ಹುಬ್ಬಳ್ಳಿ : ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ 77ನೇ ಜನ್ಮದಿನದ ಅಂಗವಾಗಿ ನಗರದ ಪಿ.ಸಿ. ಜಾಬಿನ ವಿಜ್ಞಾನ ಮಹಾವಿದ್ಯಾಲಯದಲ್ಲಿ ಗುರುವಾರದಂದು ಎನ್ಸಿಸಿ ಮತ್ತು ಎನ್ಎಸ್ಎಸ್ ವಿಯಿಂದ ರಕ್ತದಾನ ಶಿಬಿರ, ಸಸಿ ನೆಡುವ ಕಾರ್ಯಕ್ರಮ ಮತ್ತು ಬಾಲಮಂದಿರದ ಮಕ್ಕಳಿಗೆ ಹಣ್ಣು ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಿಮ್್ಸ ರಕ್ತದಾನ ವಿಭಾಗದ ಅಧಿಕಾರಿ ಡಾ. ಅನಿಲಕುಮಾರ ಮಾತನಾಡಿ, 18 ವರ್ಷ ಮೇಲ್ಪಟ್ಟಿರುವ 45 ಕೆಜಿ ತೂಕಕ್ಕಿಂತ ಹೆಚ್ಚಿಗೆ ತೂಕ ಇದ್ದವರು ಮತ್ತು 12.5 ರಷ್ಟು ಹೆಚ್ಚಿನ ರಕ್ತಕಣ ಇರುವವರು ಯಾರು ಬೇಕಾದರು ರಕ್ತದಾನ ಮಾಡಬಹುದು ಎಂದು ತಿಳಿಸಿದರು.
ಮಹಿಳಾ ವೈದ್ಯಕೀಯ ಘಟಕದ ವೈದ್ಯೆ ಡಾ. ಭಾರತಿ ಭಾವಿಕಟ್ಟಿ, ಒಬ್ಬರ ರಕ್ತ ಮೂರು ಜನರ ಪ್ರಾಣ ಉಳಿಸುತ್ತದೆ ಹಾಗೂ ರಕ್ತದಾನ ಮಾಡಿದವರಲ್ಲಿ ಹೊಸ ರಕ್ತಕಣಗಳು ಉತ್ಪಾದನೆಯಾಗುತ್ತವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಲ್.ಡಿ. ಹೊರಕೇರಿ ಮಾತನಾಡಿ, ಡಾ. ಪ್ರಭಾಕರ ಕೋರೆ ಅವರು ಆರೋಗ್ಯಕ್ಕೆ ಹೆಚ್ಚಿನ ಮಹತ್ವ ಕೊಡುವಂತವರು. ಅದಕ್ಕಾಗಿ ಜನರ ಆರೋಗ್ಯ ದೃಷ್ಟಿಯಿಂದ ಅನೇಕ ಆಸ್ಪತ್ರೆಗಳನ್ನು ನಿರ್ವಿುಸಿದ್ದಾರೆ. ಅವರ ಆರೋಗ್ಯಯುತವಾದ ಆಲೋಚನೆಗಳು, ವಿಚಾರಗಳು, ನಮಗೆ ಮಾದರಿಯಗಿವೆ ಎಂದರು.
ಮಹಿಳಾ ವೈದ್ಯಕೀಯ ಘಟಕದ ವೈದ್ಯರಾದ ಡಾ. ಆಶಾ ಪಾಟೀಲ, ಡಾ. ಜಯಶ್ರೀ ಬಳಿಗಾರ, ಪದವಿ ಪೂರ್ವ ಪ್ರಾಚಾರ್ಯ ವಿ.ಆರ್. ವಾಘಮೋಡಿ, ಕಾಲೇಜು ವೇದಿಕೆ ಉಪಾಧ್ಯಕ್ಷ ಡಾ. ಸುಧಾ ಪಾಟೀಲ, ಪಿಯು ವಿಭಾಗದ ಕಾಲೇಜು ವೇದಿಕೆ ಉಪಾಧ್ಯಕ್ಷ ವೇಣುಗೋಪಾಲ ಎಚ್.ಆರ್., ಕ್ರೀಡಾ ವೇದಿಕೆ ಉಪಾಧ್ಯಕ್ಷೆ ಅಮ್ರಿತಾ ಅಣ್ಣಿಗೇರಿ ಹಾಗೂ ಇತರರು ಉಪಸ್ಥಿತರಿದ್ದರು.
51 ಯುನಿಟ್ಗೂ ಹೆಚ್ಚಿನ ರಕ್ತ ಸಂಗ್ರಹ ಮಾಡಲಾಯಿತು. ಡಾ. ಪ್ರಭಾಕರ್ ಕೋರೆ ಅವರ ಜೀವನ ಸಾಧನೆಯ ಕಿರುಚಿತ್ರವನ್ನು ವಿದ್ಯಾರ್ಥಿಗಳಿಗೆ ತೋರಿಸಲಾಯಿತು.
ದೈಹಿಕ ನಿರ್ದೇಶಕ ಡಾ. ಪ್ರಭಾಕರನ್ ಟಿ. ಸ್ವಾಗತಿಸಿದರು. ಡಾ. ಸುಮಂಗಲಾ ಪಾಟೀಲ ನಿರೂಪಿಸಿದರು. ಎನ್.ಸಿ.ಸಿ. ಅಧಿಕಾರಿ ಡಾ. ಎಲ್.ಸಿ. ಕುಲಕರ್ಣಿ ವಂದಿಸಿದರು.
ಡಾ. ಪ್ರಭಾಕರ ಕೋರೆ ಅವರ ಜನ್ಮದಿನದ ನಿಮಿತ್ತ ಮಹಾವಿದ್ಯಾಲಯದ ಆವರಣದಲ್ಲಿ ಸಸಿ ನೆಡಲಾಯಿತು. ಉಣಕಲ್ಲನ ಬಾಲಮಂದಿರದ ಮಕ್ಕಳಿಗೆ ಹಣ್ಣು ವಿತರಿಸಲಾಯಿತು.