ಜೀವ ರಾಶಿಗಳ ರಕ್ಷಾ ಕವಚ ಓಝೋನ್​ ರಕ್ಷಣೆ ಅಗತ್ಯ

25 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಭೂಮಿಯ ಮೇಲೆ ಮಾನವ ಹಾಗೂ ಇತರ ಜೀವರಾಶಿಗಳಿಗೆ ರಕ್ಷಾ ಕವಚವಾದ ಓಝೋನ್​ ಪದರು ವಾಯು ಮಾಲಿನ್ಯದಿಂದ ನಾಶವಾಗುತ್ತಿರುವುದು ಆತಂಕಕಾರಿ ಘಟನೆ ಎಂದು ಮೊರಬ ಕಾಲೇಜಿನ ಪ್ರಾಚಾರ್ಯ ಸೈಯದ್​ ಯಾಜ್​ ಅಹ್ಮದ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪವು ವಿಶ್ವ ಓಝೋನ್​ ದಿನ ನಿಮಿತ್ತ ಸುಳ್ಳದ ಶ್ರೀ ಶಿವಾನಂದ ಭಾರತಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಓಝೊನ್​ ಪದರು ರಕ್ಷಣೆಯಲ್ಲಿ ಸಹಕಾರಯುತ ಪ್ರಯತ್ನ ಉಪನ್ಯಾಸ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಓಝೋನ್​ ಪದರು ನಾಶವಾಗಲು ಮಾನವ ನಿರ್ಮಿತ ಕೈಗಾರಿಕೆಗಳು, ಏರ್​ಕಂಡೀಷನರ್​ಗಳು ನೇರ ಕಾರಣ. ಈ ಪದರು ನಾಶದಿಂದ ಮಾನವ ಸೇರಿ ಭೂಮಿ ಮೇಲಿನ ಸಕಲ ಜೀವರಾಶಿಗಳಿಗೆ ಮಾರಕವಾಗಿದೆ. ಸೂರ್ಯನಿಂದ ಬಿಡುಗಡೆಯಾಗುವ ಅತ್ಯಂತ ಅಪಾಯಕಾರಿ ಅತಿ ನೇರಳೆ ಕಿರಣಗಳು ನೇರವಾಗಿ ಭೂಮಿಗೆ ಅಪ್ಪಳಿಸುವುದರಿಂದ ದೇಹ ರೋಗ ನಿರೋಧಕ ಶಕ್ತಿ ಕಳೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಸಿಎಫ್​ಸಿ ನಿಯಂತ್ರಣ ಅಗತ್ಯ ಎಂದರು.
ವೀರಣ್ಣ ಒಡ್ಡೀನ ಮಾತನಾಡಿ, ಓಝೋನ ಪದರಿಗೆ ರಂಧ್ರ ಬಿದ್ದ ವಿಷಯ 1974ರಲ್ಲೇ ಪತ್ತೆ ಹಚ್ಚಲಾಗಿದ್ದು, ಸಿಎಫ್​ಸಿ ನಿಷೇಧಕ್ಕೆ ಭಾರತ ಸೇರಿ ಜಗತ್ತಿನ ಅನೇಕ ದೇಶಗಳು ಮಾಂಟ್ರಿಯಲ್​ ಒಪ್ಪಂದಕ್ಕೆ ಸಹಿ ಹಾಕಿವೆ. ಭವಿಷ್ಯದಲ್ಲಿ ಇದು ಗಂಡಾಂತರ ಕಾದಿದ್ದು, ಅಮೂಲ್ಯ ಜೀವ ರಾಶಿಗಳ ರಕ್ಷಾ ಕವಚ ಓಝೋನ್​ ರಕ್ಷಿಸುವ ಪ್ರಯತ್ನ ಅಗತ್ಯ ಎಂದರು.
ಸುಳ್ಳದ ಗ್ರಾಪಂ ಅಧ್ಯಕ್ಷ ಶಿವಕಲ್ಲಪ್ಪ ದೇಮಕ್ಕನವರ ಕಾರ್ಯಕ್ರಮ ಉದ್ಘಾಟಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಯಲ್ಲಪ್ಪ ಮಾದರ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಹಸಬಿ ಜಿ. ಎಸ್​., ಹಳ್ಳೂರ ಆರ್​.ಬಿ., ವಿದ್ಯಾರ್ಥಿಗಳು, ಇತರರು ಇದ್ದರು.
ಎಸ್​.ಎಸ್​. ಜಗತಾಪ ಸ್ವಾಗತಿಸಿದರು. ಧನವಂತ ಹಾಜವಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಚಿತ್ರಾ ಜಿ. ನಿರೂಪಿಸಿದರು. ಎಸ್​.ಎಸ್​. ಹೊಸಮನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net