

ಮಂಡ್ಯ: ಪರಿಸರಕ್ಕೆ ಹಾನಿಯಾಗುವಂತಹ ಯಾವುದೇ ಕೆಲಸಗಳನ್ನು ಯಾರೂ ಮಾಡಬಾರದು. ಬದಲಿಗೆ ಪರಿಸರಕ್ಕೆ ಪ್ರೇರಣೆಯಾಗುವಂತಹ ಕಾರ್ಯಕ್ರಮಗಳನ್ನು ನಮ್ಮ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಮತ್ತೊಬ್ಬರಿಗೆ ಮಾದರಿಯಾಗಬೇಕು ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ವೇಣುಗೋಪಾಲ್ ಕಿವಿಮಾತು ಹೇಳಿದರು.
ಇಲ್ಲಿನ ಅರ್ಕೇಶ್ವರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅನನ್ಯ ಹಾರ್ಟ್ ಸಂಸ್ಥೆ, ರೋಟರಿ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಓಝೋನ್ ದಿನ ಮತ್ತು ವಿಶ್ವ ಆತ್ಮಹತ್ಯೆ ತಡೆ ದಿನ ಹಾಗೂ ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಶಾಲಾ ಕಾಲೇಜುಗಳಲ್ಲಿ ಪರಿಸರ ಸಂರಕ್ಷಣೆ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ಇದರಿಂದ ಹೆಚ್ಚಿನ ಅರಿವು ಸಿಕ್ಕಂತಾಗುತ್ತದೆ. ಸಾಕ್ಷರತೆ ಬಗ್ಗೆಯೂ ತಿಳಿದುಕೊಳ್ಳುವುದು ಮುಖ್ಯವಾಗಬೇಕು. ಅಕ್ಷರ ಜ್ಞಾನವು ಎಲ್ಲರಿಗೂ ಇರಬೇಕು. ಆತ್ಮಹತ್ಯೆಯೇ ಎಲ್ಲದಕ್ಕೂ ಪ್ರೇರಣೆಯಲ್ಲ ಎಂಬುದನ್ನು ನೊಂದ ಮನಸು ಅರ್ಥ ಮಾಡಿಕೊಳ್ಳಬೇಕು. ಆದರ್ಶ ದಾಯಕ ವ್ಯಕ್ತಿಗಳನ್ನು ನೋಡಿ ಕಲಿತರೆ ಇಂತಹ ಆತ್ಮಹತ್ಯೆ ಪ್ರಕರಣಗಳನ್ನು ತಡೆಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಾಂಶುಪಾಲ ಹನುಮಂತಪ್ಪ, ಉಪಪ್ರಾಂಶುಪಾಲ ಲೋಕೇಶ್, ರೋಟರಿ ಅಧ್ಯಕ್ಷ ನಾರಾಯಣ್, ಉಪನ್ಯಾಸಕರಾದ ನಾಗರಾಜು, ಮನುಕುಮಾರ್, ಮೃತ್ಯುಂಜಯ, ಅನನ್ಯ ಹಾರ್ಟ್ ಸಂಸ್ಥೆ ಅಧ್ಯಕ್ಷೆ ಬಿ.ಎಸ್.ಅನುಪಮಾ ಇತರರಿದ್ದರು.