

ಮಂಡ್ಯ: ಸಸ್ಯ ಸಂಪತ್ತನ್ನು ರಕ್ಷಿಸಿಕೊಳ್ಳಬೇಕಾದುದು ಪ್ರತಿಯೊಬ್ಬರ ಕರ್ತವ್ಯ ಎಂದು ಸಂಪನ್ಮೂಲ ವ್ಯಕ್ತಿ ಎಲ್.ಎಸ್. ನಂಜರಾಜು ತಿಳಿಸಿದರು.
ತಾಲೂಕಿನ ಚಿಕ್ಕಮಂಡ್ಯ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ವಿಶ್ವ ಓಜೋನ್ ದಿನದ ಅಂಗವಾಗಿ ಆಯೋಜಿಸಿದ್ದ ವಿದ್ಯಾರ್ಥಿಗಳ ಮೂಲಕ ಸಸ್ಯ ಸಾಕ್ಷರತಾ ಆಂದೋಲನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಸ್ಯ ಸಂಕುಲ ಪ್ರಕೃತಿಯ ನಿಜವಾದ ಸಂಪತ್ತಾಗಿದೆ. ಭೂಮಿಯನ್ನು ಕಾಪಾಡಲು ಜಲ ಮತ್ತು ಸಸ್ಯ ಸಂಪತ್ತನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಬಗ್ಗೆ ಪ್ರೌಢಶಿಕ್ಷಣದಲ್ಲಿ ಅಳವಡಿಸಿಕೊಳ್ಳುವುದು ತೀರಾ ಅಗತ್ಯತೆ ಎನಿಸಿದೆ ಎಂದರು.
ನೀರು ಮತ್ತು ಸಸ್ಯ ಇಲ್ಲದಿದ್ದರೆ ಮನುಕುಲದ ಅಸ್ತಿತ್ವ ಹೋಗುತ್ತಿತ್ತು. ಈ ಸಂಪತ್ತನ್ನು ಮುಂದಿನ ತಲೆಮಾರಿಗೆ ರಕ್ಷಿಸುವ ಹೊಣೆಗಾರಿಕೆ ಎಲ್ಲರ ವಿದ್ಯಾರ್ಥಿ ಮೇಲಿದೆ. ಸಸ್ಯ ಎನ್ನುವುದು ಸರಳ ಸಾಕ್ಷರತೆ. ಪೂರ್ವಿಕರು ನೆಡುತೋಪು ಮತ್ತು ಗುಂಡು ತೋಪುಗಳಲ್ಲಿ ಸಸ್ಯ ಸಂರಕ್ಷಣೆ ಮಾಡಿ ಅತಿ ಹೆಚ್ಚು ಆಮ್ಲಜನಕವನ್ನು ಪಡೆದುಕೊಳ್ಳುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ಆಮ್ಲಜನಕವನ್ನು ಹಣ ಕೊಟ್ಟು ಪಡೆಯುವಂತಹುದ್ದನ್ನು ಬೇರೆ ರಾಷ್ಟ್ರಗಳಲ್ಲಿ ಕಾಣಬಹುದಾಗಿದೆ ಎಂದರು.
ಉಪ ಪರಿಸರ ಅಧಿಕಾರಿ ಭವ್ಯಾ ಸಸ್ಯ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್ ವಿದ್ಯಾರ್ಥಿಗಳ ಮೂಲಕ ಸಸ್ಯ ಸಾಕ್ಷರತಾ ಕಾರ್ಯಕ್ರಮಗಳ ಮಾಹಿತಿ ನೀಡಿ ಪ್ರತಿ ವರ್ಷ ಸಸಿಗಳನ್ನು ನೆಟ್ಟು ಬೆಳೆಸಿದ ವಿದ್ಯಾರ್ಥಿಗಳಿಗೆ 6 ಸಾವಿರ ರೂ ನಗದನ್ನು ನೀಡಿ ಪುರಸ್ಕರಿಸಿದರು. ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಚ್.ಎಂ. ದೇವರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಚಿತ್ರಕೂಟದ ಮುಖ್ಯಸ್ಥ ಅರವಿಂದ ಪ್ರಭು, ಪರಿಚಯ ಪ್ರಕಾಶನದ ಮುಖ್ಯಸ್ಥ ಶಿವಕುಮಾರ್ ಆರಾಧ್ಯ, ಪರಿಸರ ಸಂಸ್ಥೆ ಕಾರ್ಯದರ್ಶಿ ಕೆ.ಪಿ.ಅರುಣಕುಮಾರಿ ಇತರರಿದ್ದರು. ಈ ಸಂದರ್ಭದಲ್ಲಿ ವಿಶ್ವ ಓಜೋನ್ ದಿನದ ಅಂಗವಾಗಿ ಚಿತ್ರಕಲಾ ಸ್ಪರ್ಧೆ, ವಿಜೇತ ಮಕ್ಕಳಿಗೆ ಪ್ರೋತ್ಸಾಹ ಧನ ಹಾಗೂ ಸಸಿ ವಿತರಣೆ ಮಾಡಲಾಯಿತು.