ಆಕ್ಸಿಜನ್​ ಪೂರೈಕೆ ನಿಲ್ಲಿಸಿದ ಪ್ಲಾಂಟ್​

3
Published on

ವರ್ಷವಾದರೂ ದುರಸ್ತಿ ಕಾಣದ ಆಮ್ಲಜನಕ ಘಟಕ | ಅಧಿಕಾರಿಗಳ ರ್ನಿಲಕ್ಷ್ಯಕ್ಕೆ ರೋಗಿಗಳ ಪಡಿಪಾಟಲು

ಟಿ.ಸಿ.ಎಸ್​.ಮೂರ್ತಿ ತಿಪಟೂರು
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋಟ್ಯಂತರ ರೂ. ವೆಚ್ಚ ಮಾಡಿ ಅಳವಡಿಸಿರುವ ಎರಡು ಆಮ್ಲಜನಕ ಘಟಕಗಳು ಸ್ಥಗಿತಗೊಂಡು ವರ್ಷವಾದರೂ ದುರಸ್ತಿ ಕಾಣದೆ ಆಕ್ಸಿಜನ್​ ಪ್ಲಾಂಟ್​ಗಳು ನಿರುಪಯುಕ್ತವಾಗಿದ್ದು, ಆಸ್ಪತ್ರೆಗೆ ಆಕ್ಸಿಜನ್​ ಕೊರತೆ ಕಾಡುತ್ತಿದೆ.


ಕರೊನಾ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ರೋಗಿಗಳಿಗೆ ತುರ್ತು ಚಿಕಿತ್ಸೆಗೆ ನೆರವಾಗಲಿ ಎಂಬ ಉದ್ದೇಶದಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಪ್ರತ್ಯೇಕ ಶೆಡ್​ ನಿರ್ಮಿಸಿ 500 ಎಲ್​.ಪಿ.ಎಂ. ಸಾಮರ್ಥ್ಯದ ಒಂದು ಆಕ್ಸಿಜನ್​ ಘಟಕ ಅಳವಡಿಸಲಾಯಿತು. ಇದೇ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್​ ಅವರ ಶಿಫಾರಸ್ಸಿನಿಂದ ಸಿಎಸ್​ಆರ್​ ನಿಧಿಯಿಂದ ಬೇರೆ ತಾಲೂಕಿಗೆ ಮಂಜೂರಾಗಿದ್ದ ಮತ್ತೊಂದು 500 ಎಲ್​.ಪಿ.ಎಂ. ಸಾಮರ್ಥ್ಯದ ಆಕ್ಸಿಜನ್​ ಘಟಕ ತಿಪಟೂರಿಗೆ ತರುವಲ್ಲಿ ಯಶಸ್ವಿಯಾಗಿದ್ದರಿಂದ ಒಟ್ಟು 100 ಹಾಸಿಗೆಗಳು ಮತ್ತು 60 ಹಾಸಿಗೆಗಳ ಪ್ರತ್ಯೇಕ ಮಹಿಳಾ ಮತ್ತು ಮಕ್ಕಳ ವಾರ್ಡ್​ ಹೊಂದಿರುವ ಸರ್ಕಾರಿ ಆಸ್ಪತ್ರೆಗೆ ಎರಡು ಆಮ್ಲಜನಕ ಘಟಕಗಳು ದೊರೆತಂತಾಗಿತ್ತು. ನಂತರ ತುರ್ತು ನಿಗಾ ಘಟಕದ ಎಲ್ಲ ವಾರ್ಡ್​ಗಳಿಗೂ ಸುಗಮವಾಗಿ ಆಮ್ಲಜನಕ ಪೂರೈಕೆ ಮಾಡಲು ಪ್ರತ್ಯೇಕ ಪೈಪ್​ಲೈನ್​ ಮತ್ತು 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಆಮ್ಲಜನಕ ಘಟಕಗಳಿಗೆ ಅಗತ್ಯವಿದ್ದ ವಿದ್ಯುತ್​ಗಾಗಿ ಪ್ರತ್ಯೇಕ 24್ಡ7 ಎಕ್ಸ್​ಪ್ರೆಸ್​ ಲೈನ್​ ಮೂಲಕ ನಿರಂತರ ವಿದ್ಯುತ್​ ಸರಬರಾಜು ವ್ಯವಸ್ಥೆ ಮಾಡಿ ಅದ್ದೂರಿಯಾಗಿ ಉದ್ಘಾಟನೆ ಮಾಡಲಾಗಿತ್ತು.


500 ಲೀಟರ್​ ಸಾಮರ್ಥ್ಯದ ಒಂದು ಟಕಕ್ಕೆ ಅಂದಾಜು 1 ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಲಾಗಿದೆ ಎನ್ನಲಾಗಿದೆ. ದಿನದ 24 ಗಂಟೆಗಳ ಕಾಲ ನಿರಂತರವಾಗಿ ಚಾಲನೆಯಲ್ಲಿರಬೇಕಾದ ಘಟಕದ ಆಕ್ಸಿಜನ್​ ಉತ್ಪಾದನಾ ಸಾಮರ್ಥ್ಯ ಕನಿಷ್ಠವೆಂದರೂ ಶೆ.93ಕ್ಕಿಂತ ಹೆಚ್ಚು ಪ್ಯೂರಿಟಿ ಇರಲೇಬೇಕು. ಪ್ರಾರಂಭದಲ್ಲಿ ಸರ್ಕಾರಿ ಅನುದಾನಡಿ ಅಳವಡಿಸಲಾದ ಪಿಸಿಐ ನಿರ್ಮಿತ ವಿದೇಶಿ ಘಟಕ ಕರೊನಾ ಸಂದರ್ಭ ಹೆಚ್ಚು ಬಳಕೆಯಾದ ಪರಿಣಾಮ ಆಕ್ಸಿಜನ್​ ಉತ್ಪಾದನಾ ಗುಣಮಟ್ಟ ದಿನೇದಿನೆ ಕ್ಷೀಣಿಸಿ ಉತ್ಪಾದನಾ ಪ್ರಮಾಣ 65ರಿಂದ 70ಕ್ಕೆ ತಲುಪಿತು. ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಂಬಂಧಪಟ್ಟ ಕಂಪನಿಗೆ ತಿಳಿಸಿದಾಗ ವಿದ್ಯುತ್​ ಸರಬರಾಜಿನಲ್ಲಿ ಅಡಚಣೆಯಾಗುತ್ತಿದೆ. 400 ವೋಲ್ಟೇಜ್​ ಇರಬೇಕಾದ ಕಡೆ ಕಡಿಮೆ
ಪ್ರಮಾಣದ ವಿದ್ಯುತ್​ ಪೂರೈಕೆಯಾಗುತ್ತಿರುವುದೇ ಇದಕ್ಕೆ ಕಾರಣ ಎಂದು ಕಂಪನಿ ಹೇಳಿತು. ಕಡೆಗೆ ಅಲ್ಪ-ಸ್ವಲ್ಪ ಪ್ರಮಾಣದಲ್ಲಿ ಆಮ್ಲಜನಕ ಉತ್ಪಾದಿಸುತ್ತಿದ್ದ ಘಟಕ ಈಗ ಸಂಪೂರ್ಣ ಸ್ಥಗಿತವಾಗಿದೆ.

ಇನ್ನು ಸಿ.ಎಸ್​.ಆರ್​. ನಿಧಿಯಡಿ 2021ರಲ್ಲಿ ಬೆಂಗಳೂರಿನ ಎ.ಎನ್​.ಝಡ್​ ಕಂಪನಿ ಅಳವಡಿಸಿದ ಆಮ್ಲಜನಕ ಉತ್ಪಾದನಾ ಘಟಕ ಉದ್ಘಾಟನೆಗೊಂಡಿದ್ದು ಬಿಟ್ಟರೆ ಇಲ್ಲಿವರೆಗೂ ಒಮ್ಮೆಯೂ ಆಮ್ಲಜನಕ ಉತ್ಪಾದಿಸಿಲ್ಲ. ಒಟ್ಟಾರೆ ಕೋಟ್ಯಂತರ ಮೌಲ್ಯದ ಎರಡು ಆಮ್ಲಜನಕ ಘಟಕಗಳು ವರ್ಷದಿಂದ ಕೆಟ್ಟು ನಿಂತಿದ್ದರೂ ಇಲ್ಲಿವರೆಗೂ ಸಂಬಂಧಪಟ್ಟವರು ಇತ್ತ ಗಮನ ಹರಿಸಿಲ್ಲ. ಕಂಪನಿಯವರು ವಾರ್ಷಿಕ ನಿರ್ವಹಣಾ ಗುತ್ತಿಗೆಯನ್ನು (ಎ.ಎಂ.ಸಿ) ಸರ್ಕಾರ ರದ್ದುಪಡಿಸಿದೆ. ಕಾಲಕಾಲಕ್ಕೆ ಘಟಕದ ಉಸ್ತುವಾರಿ ನೋಡಿಕೊಳ್ಳಲು ಸಾಧ್ಯವಿಲ್ಲವೆಂದು ಕೈ ತೊಳೆದುಕೊಂಡಿರುವುದು ಟಕವಿದ್ದರೂ ಪ್ರಯೋಜನವಿಲ್ಲದಂತಾಗಿದೆ.
ಆಮ್ಲಜನಕ ಉತ್ಪಾದನಾ ಘಟಕ ನಿರ್ವಹಣೆ ಇಲ್ಲದೆ ಹಾಳಾಗಿವೆ. ಹಾಳಾಗಿರುವ ಕಂಪ್ರೆಷರ್​ ಖರೀದಿಗೆ ಸರ್ಕಾರದಿಂದ ಹಣ ಮಂಜೂರಾಗಿಲ್ಲ. ಸದ್ಯ ಜಂಬೋ ಆಕ್ಸಿಜನ್​ ಸಿಲಿಂಡರ್​ ಮತ್ತು ಕರೊನಾ ಸಂದರ್ಭ ದಾನಿಗಳು ನೀಡಿದ ಕಾನ್ಸನ್​ಟ್ರೇಟರ್​ಗಳನ್ನು ಬಳಸಿ ರೊಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net