ಆಯನೂರಿನಲ್ಲಿ ಎತ್ತುಗಳ ಜಾತ್ರೆ ಆರಂಭ

17 anr jathre 3
Published on

ಆಯನೂರು: ಆಯನೂರಿನಲ್ಲಿ ಎತ್ತುಗಳ ಜಾತ್ರೆ ಆರಂಭವಾಗಿದೆ. ಕರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಎತ್ತುಗಳ ಜಾತ್ರೆ 2 ವಾರದಿಂದ ಪುನರಾರಂಭಗೊಂಡಿದೆ.

ಭಾನುವಾರ ಆಯನೂರು ಸೇರಿ ನುಗ್ಗಿಮಲ್ಲಾಪುರ, ಆಡಗಡಿ, ಕಾಚಿಕೊಪ್ಪ, ಹಾರನಹಳ್ಳಿ, ಕುಂಸಿ ಗ್ರಾಮಗಳಿಂದ ಜಾತ್ರೆಗೆ ಎತ್ತುಗಳು ಬಂದಿದ್ದವು. ಹಳ್ಳಿಕಾರು, ಅಮೃತ ಮಹಲ್, ಮಲ್ನಾಡ್ ಕಗ್ಗ, ಸಿಂಧಿ ಹೋರಿ, ಸಿಂಧಿ ಕ್ರಾಸ್ ಹೀಗೆ ಅನೇಕ ತಳಿಯ ಜಾನುವಾರುಗಳು ಜಾತ್ರೆಯಲ್ಲಿ ಸೇರುವುದೇ ವಿಶೇಷ. ಜನವರಿಯಿಂದ ಜೂನ್​ವರೆಗೆ ಪ್ರತಿ ಭಾನುವಾರ ನಡೆಯಲಿರುವ ಎತ್ತುಗಳ ಜಾತ್ರೆಯಲ್ಲಿ ಕೋಟ್ಯಂತರ ರೂ. ವ್ಯವಹಾರ ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಎತ್ತುಗಳ ಸಾಕಣೆ ಕ್ಷೀಣಿಸಿರುವುದರಿಂದ ಜಾತ್ರೆ ಸೇರುವುದು ಕಡಿಮೆಯಾಗಿದೆ. ರೈತರು ಎತ್ತಿನ ಜಾತ್ರೆ ಎಂದರೆ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ರೈತರಾದ ಅಸ್ಲಾಂಸಾಬ್, ಉಮ್ಮನಾಯ್ಕ, ಅಬ್ದುಲ್ ಕರೀಂ, ಲತೀಫ್, ಯೋಗೇಶ ಗೌಡ, ಇರ್ಫಾನ್, ಬಸಣ್ಯಪ್ಪ, ಮಹೇಶಪ್ಪ, ಜಹೀರ್ ಅಹಮ್ಮದ್ ಇತರರಿದ್ದರು.

2 ಹಲ್ಲಿನ ಹೋರಿಗೆ 1.75 ಲಕ್ಷ ರೂ.: ನುಗ್ಗಿ ಮಲ್ಲಾಪುರ ಗ್ರಾಮದ ಒಂದು ಜತೆ 2 ಹಲ್ಲಿನ ಹಳ್ಳಿಕಾರ್ ಹೋರಿ ಬೆಲೆ 1,75,000 ರೂಪಾಯಿ. ಈ ಎತ್ತುಗಳು ಜನರ ಗಮನ ಸೆಳೆದಿದ್ದು ವಿಶೇಷ. ಹೊಸನಗರ, ರಿಪ್ಪನ್​ಪೇಟೆ, ಮಾಸ್ತಿಕಟ್ಟೆ, ಹೊನ್ನಾಳಿ, ತುಮ್ಮಿನಕಟ್ಟೆ, ತೀರ್ಥಹಳ್ಳಿ ಭಾಗಗಳಿಂದ ಎತ್ತುಗಳನ್ನು ಕೊಳ್ಳುವ ಸಲುವಾಗಿ ಜನರು ಬರುತ್ತಾರೆ. ಕನಿಷ್ಠ 70 ಸಾವಿರ ರೂ.ನಿಂದ ಗರಿಷ್ಠ 2 ಲಕ್ಷ ರೂ.ವರೆಗಿನ ಮೌಲ್ಯದ ಹೋರಿಗಳು ಸೇರುತ್ತವೆ. ಹೋರಿಗೆ ಹಲ್ಲುಗಳ ಎಷ್ಟಿವೆ ಎಂಬುದರ ಮೇಲೆ ಅವುಗಳ ಮೌಲ್ಯ ನಿರ್ಧಾರವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net