ಭೂ ಸ್ವಾಧೀನಕ್ಕೆ ಒಪ್ಪಿದ ಮಾಲೀಕರು

10-byd-1
Published on

ಬ್ಯಾಡಗಿ: ಭೂ ಮಾಲೀಕರು ರಸ್ತೆ ಅಗಲೀಕರಣದ ವಿರೋಧಿಗಳಲ್ಲ. ಅವರಿಗೂ ಅಭಿವೃದ್ಧಿ್ದೆ ಸಹಕರಿಸುವ ಮನೋಭಾವವಿದೆ. ಆದರೆ, ತಮ್ಮ ಕಟ್ಟಡದ ಜಾಗ ಕಳೆದುಕೊಳ್ಳುವಾಗ ಉಳಿಸಿಕೊಳ್ಳಲು ಯತ್ನ ನಡೆಸಿದ್ದರು. ಜಾಗದ ಮಾಲೀಕರು ಹಾಲಿ, ಮಾಜಿ ಶಾಸಕರ ಸಮ್ಮುಖದಲ್ಲಿ ಜರುಗಿದ ಸಭೆಯಲ್ಲಿ ಜಿಲ್ಲಾಡಳಿತ ತೆಗೆದುಕೊಂಡ ನಿರ್ಧಾರಕ್ಕೆ ಬೇಷರತ್ತಾಗಿ ಒಪ್ಪಿಕೊಂಡಿದ್ದಾರೆ. ಇನ್ಮುಂದೆ ಯಾವುದೇ ತೊಂದರೆಯಿಲ್ಲದೆ ರಸ್ತೆ ವಿಸ್ತರಣೆ ಕಾಮಗಾರಿ ಕಾನೂನಿನಂತೆ ಜರುಗಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ದಾನಮ್ಮನವರ ತಿಳಿಸಿದರು.

ಪಟ್ಟಣದ ರಸ್ತೆ ಅಗಲೀಕರಣ ಹೋರಾಟ ಸಮಿತಿ ಹಾಗೂ ವರ್ತಕರ ಸಂಘದ ನೇತೃತ್ವದಲ್ಲಿ ಜರುಗಿದ ಐದನೇ ದಿನದ ಹೋರಾಟದಲ್ಲಿ ಜಿಲ್ಲಾಡಳಿತದ ನಿರ್ಧಾರ ಪ್ರಕಟಿಸಿದರು.

ರಸ್ತೆ ಅಗಲೀಕರಣ ಮಾಡಬೇಕೆನ್ನುವ ಸಾರ್ವಜನಿಕರು, ಸಂಘ -ಸಂಸ್ಥೆಗಳ ಧ್ವನಿಗೆ ಮಾಲೀಕರು ಕೈ ಜೋಡಿಸಲಿಲ್ಲ. ಆಗ ಇಬ್ಬರ ನಡುವಿನ ಸಮನ್ವಯದ ಕೊರತೆಯಿಂದ ಕಳೆದ 15 ವರ್ಷಗಳಿಂದ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ತಮ್ಮ ಹಕ್ಕಿಗಾಗಿ ಮಾಲೀಕರು ಹೋರಾಟ ನಡೆಸಿದ್ದಾರೆ. ಈಗ ಬೇಷರತ್ತಾಗಿ ಜಿಲ್ಲಾಡಳಿತದ ಭೂಸ್ವಾಧೀನ ಪ್ರಕ್ರಿಯೆಗೆ ಸಹಕಾರ ನೀಡಿರುವುದು ಸ್ವಾಗತಾರ್ಹ. ತಾವು ಮಾಲೀಕರ ಮನವೊಲಿಸಿ, ಕಾಯ್ದೆಯಂತೆ ರಸ್ತೆ ವಿಸ್ತರಣೆಗೆ ಒಪ್ಪಿಗೆ ಪಡೆದಿದ್ದೇವೆ. ಕೆಲ ದಿನಗಳಲ್ಲಿ ನ್ಯಾಯಾಲಯ ತಡೆಯಾಜ್ಞೆ ತೆರವುಗೊಳಿಸಿ, ನೋಟಿಫಿಕೇಷನ್ ಪ್ರಕಾರ ನಿಗದಿಪಡಿಸಿದ ದಿನಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಹಿಂದಿನ ಘಟನೆಗಳನ್ನು ಎಲ್ಲರೂ ಮರೆತು ಒಗ್ಗಟ್ಟಾಗಿ ಪಟ್ಟಣದ ಅಭಿವೃದ್ಧಿಗೆ ಕೈ ಜೋಡಿಸೋಣ. ಕಾನೂನುಬದ್ಧವಾಗಿ ಪರಿಹಾರ ನೀಡುವ ಮೂಲಕ ಸಂತ್ರಸ್ತ ಮಾಲೀಕರಿಗೆ ಸ್ಥಳೀಯವಾಗಿ ಸಹಕಾರ, ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಭೂಮಿ ಕಳೆದುಕೊಳ್ಳುವ ಮಾಲೀಕರಿಗೆ ಸರ್ಕಾರದಿಂದ ಭೂಪರಿಹಾರ ಹಾಗೂ ಪುರಸಭೆಯಿಂದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಬದ್ಧವಾಗಿದ್ದೇವೆ ಎಂದರು.

ನಾಲ್ಕಾರು ಬಾರಿ ಸಭೆ: ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನಾಲ್ಕಾರು ಬಾರಿ ಮಾತುಕತೆ, ಸಂಧಾನ ಯತ್ನ ನಡೆದಿದ್ದು, ಎಲ್ಲವೂ ವಿಫಲವಾಗಿದ್ದವು. ಆದರೆ, ಕಳೆದ ಐದು ದಿನಗಳಿಂದ ಸಾರ್ವಜನಿಕರು, ಸಂಘ, ಸಂಸ್ಥೆಗಳು ನಿರಂತರವಾಗಿ ಕೈಗೊಂಡ ಹೋರಾಟದ ಬಳಿಕ ಮಾಲೀಕರ ಮನವೊಲಿಸುವಲ್ಲಿ ಯಶಸ್ವಿಯಾಯಿತು. ಬಳಿಕ ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಹಾವೇರಿಯಲ್ಲಿ ಮಾಲೀಕರೊಂದಿಗೆ ಮಾತುಕತೆ ನಡೆಸಿದಾಗ ಒಂದು ಹಂತಕ್ಕೆ ಬಂದಿತ್ತು. ಕೊನೆಗೆ ಮಂಗಳವಾರ ತಹಸೀಲ್ದಾರ್ ಕಚೇರಿಯಲ್ಲಿ ಹೋರಾಟಗಾರರು, ಮಾಲೀಕರ ಸಭೆ ಏರ್ಪಡಿಸಿ ಜಿಲ್ಲಾಡಳಿತ ತೆಗೆದುಕೊಂಡ ನಿರ್ಧಾರಕ್ಕೆ ಎಲ್ಲರೂ ಬದ್ಧ್ದಾಗಿರುವಂತೆ ಸೂಚನೆ ನೀಡಿದಾಗ ಎಲ್ಲರ ಸಹಮತ ವ್ಯಕ್ತಪಡಿಸಿದರು.

ಮಣ್ಣು ತೆರವು: ಹೋರಾಟಗಾರರು ಮುಖ್ಯರಸ್ತೆಯಲ್ಲಿ ಮಣ್ಣಿನ ಗುಡ್ಡೆ ಹಾಗೂ ಶಾಮಿಯಾನ ಹಾಕುವ ಮೂಲಕ ರಸ್ತೆ ಬಂದ್ ಮಾಡಿದ್ದರು. ಜಿಲ್ಲಾಧಿಕಾರಿಗಳ ನಿರ್ಧಾರ ಪ್ರಕಟಿಸಿದ ಬಳಿಕ ಎಲ್ಲ ಅಂಗಡಿಗಳು ಬಾಗಿಲು ತೆರೆಯಲು ಅವಕಾಶ ಕಲ್ಪಿಸಿದ್ದು, ರಸ್ತೆಯಿಂದ ಮಣ್ಣು ತೆರವುಗೊಳಿಸಿ ಸಾರ್ವಜನಿಕರು, ವಾಹನ ಓಡಾಟಕ್ಕೆ ಅನುಕೂಲ ಕಲ್ಪಿಸಲಾಯಿತು.

ಎಸ್ಪಿ ಅಂಶುಕುಮಾರ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ವಿರೂಪಾಕ್ಷಪ್ಪ ಬಳ್ಳಾರಿ, ರಾಜ್ಯ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ತಹಸೀಲ್ದಾರ್ ಪೀರೋಜ್​ಷಾ ಸೋಮನಕಟ್ಟೆ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ, ಉಪಾಧ್ಯಕ್ಷ ಸುಭಾಸ ಮಾಳಗಿ, ಸದಸ್ಯರಾದ ಬಸವರಾಜ ಛತ್ರದ, ಗಂಗಣ್ಣ ಎಲಿ, ಸುರೇಶ ಚಲವಾದಿ, ರಾಜು ಮೋರಗೇರಿ, ಗಿರೀಶ ಇಂಡಿಮಠ, ಮುರಿಗೆಪ್ಪ ಶೆಟ್ಟರ್, ಸುರೇಶ ಮೇಲಗಿರಿ, ಅಶೋಕ ಜೈನ, ರಾಕೇಶ ಜೈನ, ಗಣೇಶ ವೆರ್ಣೆಕರ, ಮೃತ್ಯುಂಜಯ ಹೊಸಂಗಡಿ, ಜಯಣ್ಣ ಶಿರೂರು, ರಾಘವೇಂದ್ರ ಶಿವಾಜಿ, ಸಿ.ಎಸ್. ಸದ್ದಲಗಿ, ಗುಡ್ಡಪ್ಪ ಹಾದಿಮನಿ, ಎಂ.ಬಿ. ಮಕಾನಂದಾರ, ಚೇತನ ಕಬ್ಬೂರು, ಇತರರಿದ್ದರು.

ಪಟ್ಟಣದ ಅಭಿವೃದ್ಧಿ ಸಲುವಾಗಿ ರಸ್ತೆ ನಿರ್ವಿುಸಲು ಎಲ್ಲ ಮಾಲೀಕರು ಒಪ್ಪಿಕೊಂಡಿದ್ದೇವೆ. ರಸ್ತೆ ಹೋರಾಟಗಾರರು, ಸಂಘ, ಸಂಸ್ಥೆಗಳ ಮೇಲೆ ಗೌರವವಿದೆ. ಜನಹಿತಕ್ಕೆ ಬದ್ಧರಾಗಿದ್ದು, ನಮ್ಮ ಹಕ್ಕಿಗಾಗಿ ಹೋರಾಟ ನಡೆಸಿದ್ದೇವು. ಇನ್ಮುಂದೆ ನಾವು ಮುಕ್ತ ಮನಸಿನಿಂದ ರಸ್ತೆ ವಿಸ್ತರಣೆಗೆ ಒಪ್ಪಿಕೊಂಡಿದ್ದೇವೆ. ಹೈಕೋರ್ಟ್​ನಲ್ಲಿ ದಾಖಲಿಸಿದ ಪ್ರಕರಣ ವಾಪಸ್ ಪಡೆದು, ಭೂಸ್ವಾಧೀನ ಪ್ರಕ್ರಿಯೆಗೆ ಸಹಕರಿಸುತ್ತೇವೆ. | ಸಿದ್ದಲಿಂಗಪ್ಪ ಶೆಟ್ಟರ್, ಭೂಮಾಲೀಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net