ಮಾಲೀಕನ ಮರೆಯಲಾಗದ ಮೂಕ ವೇದನೆ

0102
Published on

ಬೆಳಗಾವಿ: ಹೆತ್ತಮ್ಮ ನನ್ನನ್ನು ಬೀದಿಯಲ್ಲಿ ಬಿಟ್ಟಾಗ, ಕೆಲವರು ಕಲ್ಲೆಸೆಯುತ್ತಿದ್ದಾಗ ನೀ ಮಾತ್ರ ಎತ್ತಿ ಮುದ್ದಾಡಿ, ಆಶ್ರಯವನ್ನೂ ಕೊಟ್ಟು ಈಗೇಕೆ ಮರೆಯಾದೆ? ಎಷ್ಟೇ ಹುಡುಕಿದರೂ ಸಿಗದೇ ಎಲ್ಲಿಗೆ ಹೋದೆೆ? ನಿನ್ನ ಕಾಣದೇ ಊಟವೇ ಸೇರುತ್ತಿಲ್ಲ. ಮತ್ತೆ ನೀ ಯಾವಾಗ ಬರುವೆ…?

ಈ ಒಡಲಾಳದ ನೋವು ಯಾರೋ ವ್ಯಕ್ತಿಯದ್ದಲ್ಲ. ಮಾಲೀಕನನ್ನು ಕಳೆದುಕೊಂಡ ಸಾಕು ನಾಯಿ ಒಳಗೊಳಗೆ ಅನುಭವಿಸುತ್ತಿರುವ ನೋವಿನ ಭಾವವಿದು.
ಉಂಡ ಮನೆಗೆ ದ್ರೋಹ ಬಗೆಯುವವರೇ ಹೆಚ್ಚಿರುವ ಈ ಕಾಲದಲ್ಲಿ ತುತ್ತು ಅನ್ನ ಹಾಕಿದ ಮಾಲೀಕನ ಅಕಾಲಿಕ ಸಾವಿಗೆ ವಾರದಿಂದ ಸರಿಯಾಗಿ ಏನನ್ನೂ ತಿನ್ನದೆ ಶ್ವಾನವೊಂದು ನೊಂದುಕೊಳ್ಳುತ್ತಿರುವ ರೀತಿ ನೋಡುಗರಿಗೆ ಮರುಕ ಹುಟ್ಟಿಸುತ್ತಿದೆ.

ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ಶಂಕರಪ್ಪ ಮಡಿವಾಳರ ಎಂಬುವವರು ಸೆ. 6ರಂದು ಹೃದಯಾಘಾತದಿಂದ ನಿಧನರಾದರು. ಅಂದಿನಿಂದ ‘ಕಡ್ಡಿ’ ಹೆಸರಿನ ಈ ಶ್ವಾನ ಏನನ್ನೂ ತಿನ್ನದೆ ಹೀಗೆ ಮೂಕವೇದನೆ ಅನುಭವಿಸುತ್ತಲೇ ಇದೆ. ತನ್ನ ಯಜಮಾನ ಈಗ ಬರ್ತಾನೆ, ಆಗ ಬರ್ತಾನೆ ಎಂದು ಕಾದು ಕುಳಿತಿದೆ.

ಮಾಲೀಕನ ನೆನಪಲ್ಲೇ ದಿಗಿಲು ಬಡಿದಂತೆ ಕುಳಿತಿರುತ್ತದೆ. ಅಲ್ಲದೆ, ನೆನಪಾದಾಗಲೆಲ್ಲ ತನ್ನ ಒಡೆಯನ ಸಮಾಧಿ ಬಳಿ ಹೋಗಿ ಕೆಲಹೊತ್ತು ನಿಂತು ಮತ್ತೆ ಮನೆಗೆ ವಾಪಾಸ್ ಬರುತ್ತಿದೆ. ಶ್ವಾನ ಕಡ್ಡಿಯ ಈ ಸ್ವಾಮಿನಿಷ್ಠೆಗೆ ಸುತ್ತಮುತ್ತಲಿನ ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಊರಿನ ಬೀದಿಯಲ್ಲಿದ್ದ ನಾಯಿಮರಿಯನ್ನು ತಂದಿದ್ದ ಶಂಕರಪ್ಪ ಅದಕ್ಕೆ ‘ಕಡ್ಡಿ’ ಎಂದು ಹೆಸರಿಟ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ತಾವು ಮಲಗುವ ಕೋಣೆಯೊಳಗೂ ತನ್ನ ಗೆಳೆಯನಂತೆ ಇಟ್ಟುಕೊಳ್ಳುತ್ತಿದ್ದರು. ಅವರೇ ದಿನಾಲೂ ಊಟ ಹಾಕುತ್ತಿದ್ದರು. ಹೀಗಾಗಿ ಶಂಕರಪ್ಪ ಮತ್ತು ಕಡ್ಡಿ ನಡುವೆ ಉತ್ತಮ ಬಾಂಧವ್ಯ ಬೆಳೆದಿತ್ತು. ಈಗ ಈ ನಾಯಿ ಪಡುತ್ತಿರುವ ನೋವು ನಮ್ಮಲ್ಲೂ ಕಣ್ಣೀರು ತರಿಸುತ್ತಿದೆ. | ನಾಗರಾಜ, ಮಲ್ಲೇಶಪ್ಪ ಗ್ರಾಮಸ್ಥರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net