

ಶಿವಮೊಗ್ಗ: ಜಿಲ್ಲಾ ಪೊಲೀಸರು ಪ್ರಸಕ್ತ ವರ್ಷದಲ್ಲಿ ಬರೋಬ್ಬರಿ 4.09 ಕೋಟಿ ರೂ. ಮೌಲ್ಯದ ವಿವಿಧ ಸ್ವತ್ತುಗಳನ್ನು ಪತ್ತೆ ಹಚ್ಚಿ ಜಪ್ತಿ ಮಾಡಿದ್ದಾರೆ. ಅದರಲ್ಲಿ 3.17 ಕೋಟಿ ರೂ. ಮೌಲ್ಯದ 2,800 ಕೆಜಿ ಚಿನ್ನಾಭರಣವೇ ಇದ್ದು 372 ಆರೋಪಿಗಳನ್ನು ಬಂಧಿಸಿದ್ದಾರೆ.
ಡಿಸೆಂಬರ್ನಲ್ಲಿ ಅಪರಾಧ ತಡೆ ಮಾಸಾಚರಣೆ ನಡೆಸುತ್ತಿದ್ದು 2020ರ ಜನವರಿಯಿಂದ ಇಲ್ಲಿವರೆಗೆ ಮನೆಗಳಲ್ಲಿ ಚಿನ್ನಾಭರಣ ಕಳವು, ಸರ ಅಪಹರಣ, ವಾಹನಗಳು ಕಳವು ಹಾಗೂ ಅಡಕೆ, ಶ್ರೀಗಂಧ ಕಳವು ಸೇರಿ 195 ಸ್ವತ್ತಿನ ಅಪರಾಧ ಪ್ರಕರಣಗಳನ್ನೂ ಬೇಧಿಸಿದ್ದು ಜಪ್ತಿ ಮಾಡಿದ ವಸ್ತುಗಳನ್ನು ಪೊಲೀಸರು ಶನಿವಾರ ಮಾಲೀಕರಿಗೆ ಹಸ್ತಾಂತರಿಸಿದರು.
ಶಿವಮೊಗ್ಗ, ಸಾಗರ, ಶಿಕಾರಿಪುರ ಮತ್ತು ಭದ್ರಾವತಿ ವಿಭಾಗದಲ್ಲಿ ಪತ್ತೆ ಕಾರ್ಯದಲ್ಲಿ ಸಿಕ್ಕಂತಹ ಚಿನ್ನಾಭರಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಡಿಎಆರ್ ಸಭಾಂಗಣದಲ್ಲಿ ಮಾಲೀಕರಿಗೆ ಹಸ್ತಾಂತರಿಸಿ ಮಾತನಾಡಿದ ಎಸ್ಪಿ ಕೆ.ಎಂ.ಶಾಂತರಾಜು, ಜಿಲ್ಲೆಯಲ್ಲಿ ಕಳೆದ ಎರಡ್ಮೂರು ವರ್ಷದಲ್ಲಿ ನಡೆದ ಮನೆಗಳ್ಳತನ, ಬೈಕ್, ಅಡಕೆ ಕಳವು ಪ್ರಕರಣಕ್ಕೆ ಸಂಬಂಧಿಸಿ 4,09,11,100 ರೂ. ಮೌಲ್ಯದ ವಸ್ತಗಳನ್ನು ಪೊಲೀಸ್ ಇಲಾಖೆ ವಶಪಡಿಸಿಕೊಂಡಿದ್ದು ಮಾಲೀಕರಿಗೆ ಮರಳಿಸಲಾಗಿದೆ ಎಂದರು.
2018, 2019 ಹಾಗೂ 2020ನೇ ಸಾಲಿನಲ್ಲಿ ನಡೆದ ಕಳವು ಪ್ರಕರಣದಲ್ಲಿ 195 ಪ್ರಕರಣಗಳನ್ನು ಪೊಲೀಸ್ ಇಲಾಖೆ ಬೇಧಿಸಿ 372 ಆರೋಪಿಗಳನ್ನು ಬಂಧಿಸಿದೆ. 3.17 ಕೋಟಿ ರೂ. ಗೂ ಅಧಿಕ ಮೌಲ್ಯದ 2.800 ಕೆಜಿ ಚಿನ್ನಾಭರಣ, 1.5 ಲಕ್ಷ ರೂ. ಮೌಲ್ಯದ 2.850 ಕೆಜಿ ಬೆಳ್ಳಿ ಆಭರಣ, 43 ಲಕ್ಷ ರೂ. ಮೌಲ್ಯದ 81 ಬೈಕ್, 82 ಲಕ್ಷ ರೂ. ಮೌಲ್ಯದ ಅಡಕೆ ಮತ್ತು ಅಡಕೆ ಸಾಗಿಸಲು ಬಳಸಿದ ವಾಹನ, 41 ಮೊಬೈಲ್ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು. ಎಎಸ್ಪಿಗಳಾದ ಡಾ. ಎಚ್.ಟಿ.ಶೇಖರ್, ಶ್ರೀನಿವಾಸಲು, ಡಿವೈಎಸ್ಪಿ ಉಮೇಶ್ ನಾಯ್್ಕ ಮತ್ತಿತರರು ಉಪಸ್ಥಿತರಿದ್ದರು.