

ಮೈಸೂರು: ವಿಶ್ವವನ್ನೇ ಕಾಡುತ್ತಿರುವ ‘ಕೋವಿಡ್-19’ ಕಲ್ಯಾಣ ಕಾರ್ಯಕ್ರಮಗಳಿಗೆ ಮಾತ್ರವಲ್ಲ, ಕಲ್ಯಾಣ ಮಂಟಪ ಮಾಲೀಕರಿಗೂ ಈಗ ಸಂಕಷ್ಟ ತಂಡೊಡ್ಡಿದೆ.
ಮದುವೆ ಕಾರ್ಯಗಳಿಗಾಗಿ ಆರು ತಿಂಗಳ ಮುಂಚೆಯೇ ಮುಂಗಡ ಪಡೆದಿದ್ದ ಮಾಲೀಕರು, ಈಗ ಲಾಕ್‌ಡೌನ್‌ನಿಂದ ತೊಂದರೆಗೆ ಸಿಲುಕುವಂತಾಗಿದೆ. ಕರೊನಾ ವೈರಸ್ ಹರಡುವ ಭೀತಿಯಿಂದ ಹೆಚ್ಚು ಜನರು ಸೇರುವಂತಿಲ್ಲ ಎಂಬ ನಿಯಮವನ್ನು ಜಾರಿಗೆ ತಂದಿರುವ ಸರ್ಕಾರ, ಕೇವಲ 50 ಜನರು ಮಾತ್ರ ಮದುವೆಯಲ್ಲಿ ಭಾಗವಹಿಸಬೇಕು ಎನ್ನುವ ನಿರ್ಬಂಧ ವಿಧಿಸಿದೆ.
ಸರ್ಕಾರದ ಈ ನಿರ್ಬಂಧದಿಂದ ಮದುವೆ ಕಾರ್ಯಕ್ರಮ ಮುಂದೂಡಿರುವವರು ಕಡಿಮೆ ಸಂಖ್ಯೆಯಲ್ಲಿದ್ದು, ಕೊಟ್ಟಿರುವ ಮುಂಗಡ ಹಣ ವಾಪಸ್ ನೀಡುವಂತೆ ಕಲ್ಯಾಣಮಂಟಪ ಮಾಲೀಕರನ್ನು ಒತ್ತಾಯಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಪಡೆದಿರುವ ಮುಂಗಡ ಹಣವನ್ನು ಮಾಲೀಕರು ಈಗಾಗಲೇ ಬ್ಯಾಂಕ್ ಸಾಲ, ತೆರಿಗೆ, ಸಿಬ್ಬಂದಿ ವೇತನ, ವಿದ್ಯುತ್ ಬಿಲ್ ಸೇರಿದಂತೆ ಇತರ ಕಾರ್ಯಗಳಿಗೆ ವೆಚ್ಚ ಮಾಡಿದ್ದಾರೆ ಎನ್ನಲಾಗಿದ್ದು, ಈಗ ಹಣ ವಾಪಸ್ ಕೇಳುತ್ತಿರುವುದರಿಂದ ಹಣ ಹಿಂದಿರುಗಿಸಲಾಗದ ಪರಿಸ್ಥಿತಿಗೆ ಬಹಳಷ್ಟು ಮಾಲೀಕರು ಸಿಲುಕಿದ್ದಾರೆ.
ಪರಿಣಾಮ ಮದುವೆ ದಿನಾಂಕ ಮುಂದೂಡಿ ಮತ್ತೊಂದು ದಿನದಲ್ಲಿ ಮದುವೆ ಮಾಡುವಂತೆ ಮಾಲೀಕರು, ಮುಂಗಡ ನೀಡಿದವರ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲವರು ದಿನಾಂಕ ಮುಂದೂಡಲು ಸಮ್ಮಿತಿಸಿದರೆ, ಬಹುತೇಕರು ಸರಳವಾಗಿ ಮನೆಯಲ್ಲಿಯೇ ಮದುವೆ ಮಾಡಿಕೊಳ್ಳುತ್ತೇವೆ. ಹಾಗಾಗಿ ಕೊಟ್ಟಿರುವ ಹಣ ವಾಪಸ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಇದರಿಂದಾಗಿ ಏನು ಮಾಡಬೇಕು ಎಂದು ತೋಚದೆ ಕಲ್ಯಾಣಮಂಟಪ ಮಾಲೀಕರು ಈಗ ಸರ್ಕಾರದ ಮೊರೆ ಹೋಗಿದ್ದಾರೆ.
ವಿನಾಯಿತಿಗೆ ಮಾಲೀಕರ ಮನವಿ: ಮದುವೆ, ಸಭೆ, ಸಮಾರಂಭಗಳು ನಡೆಯಲಿ ಅಥವಾ ನಡೆಯದಿದ್ದರೂ ನಿರ್ವಹಣಾ ವೆಚ್ಚ, ನಗರಪಾಲಿಕೆ ಕಂದಾಯ, ಸೇವಾ, ವಿದ್ಯುತ್, ನೀರಿನ ಬಿಲ್‌ಅನ್ನು ಪಾವತಿಸಲೇಬೇಕು. ಇದಲ್ಲದೆ ನಿರ್ವಹಣೆಗಾಗಿ ಪ್ರತಿ ಕಲ್ಯಾಣಮಂಟಪದಲ್ಲಿ 4ರಿಂದ 6 ಸಿಬ್ಬಂದಿ, ಕಾವಲುಗಾರರು ಇರಲಿದ್ದು, ವೇತನ ಪಾವತಿಸಬೇಕಿದೆ. ಇದಕ್ಕೆಲ್ಲ ತಿಂಗಳಿಗೆ 1.5 ಲಕ್ಷ ರೂ.ನಿಂದ 1.75 ಲಕ್ಷ ರೂ.ವರೆಗೆ ವ್ಯಯ ಮಾಡಲೇಬೇಕಿದೆ.
ನಗರಪಾಲಿಕೆಗೆ ವಾರ್ಷಿಕ ತೆರಿಗೆ 5ರಿಂದ 6 ಲಕ್ಷ ರೂ.ವರೆಗೂ ಪಾವತಿಸಬೇಕು. ವಿದ್ಯುತ್ ಬಿಲ್ ಕನಿಷ್ಠ 20 ರಿಂದ 25 ಸಾವಿರ ರೂ. ವರೆಗೂ ಬರಲಿದ್ದು, ಬಳಸದಿದ್ದರೂ ನೀರಿಗೂ ಕನಿಷ್ಠ ಬಿಲ್ (ಮಿನಿಮಮ್) ಕಟ್ಟಲೇಬೇಕಿದೆ.
ಲಾಕ್‌ಡೌನ್ ಆರಂಭಗೊಂಡ ಮಾ.23ರಿಂದ ಮೇ ವರೆಗೆ ಪ್ರತಿ ಕಲ್ಯಾಣಮಂಟಪದಲ್ಲಿ 20ರಿಂದ 25 ಮದುವೆಗಳು ನಿಗದಿಯಾಗಿದ್ದವು. ಆದರೆ ಈಗ ಅವೆಲ್ಲವೂ ರದ್ದಾಗಿರುವುದರಿಂದ ಮಾಲೀಕರೇ ನಿರ್ವಹಣಾ ವೆಚ್ಚವನ್ನು ಭರಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಕಂದಾಯ ಪಾವತಿಸಲು ಕಷ್ಟವಾಗುವುದರಿಂದ ಈ ವರ್ಷ ತೆರಿಗೆ ವಿನಾಯಿತಿ ನೀಡಬೇಕು ಎಂದು ಮೈಸೂರು ಕಲ್ಯಾಣ ಮಂಟಪ ಮಾಲೀಕರ ಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಜಿಲ್ಲಾಧಿಕಾರಿ, ನಗರಪಾಲಿಕೆ ಆಯುಕ್ತರಿಗೂ ಮನವಿ ಸಲ್ಲಿಸಲಾಗಿದೆ.
ನಾಗರಿಕರಲ್ಲಿ ಮಾಲೀಕರ ಕೋರಿಕೆ: ಮದುವೆಗಾಗಿ ಈಗಾಗಲೇ ಮುಂಗಡ ನೀಡಿ ಕಲ್ಯಾಣಮಂಟಪ ಕಾಯ್ದಿರಿಸಿರುವವರು ಸರ್ಕಾರದ ನಿರ್ಬಂಧದಂತೆ ಮದುವೆ ಮಾಡಲು ಮುಂದೆ ಬಂದರೆ ನಿಗದಿತ ಬಾಡಿಗೆ ದರದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗುವುದು. ಇಲ್ಲವಾದರೆ ಮುಂದಿನ ಆರು ತಿಂಗಳಲ್ಲಿ ಯಾವುದಾದರೂ ದಿನಾಂಕದಲ್ಲಿ ಮದುವೆ ಮಾಡಲು ಅವಕಾಶ ಮಾಡಿಕೊಡಲಾಗುವುದು.
ಇದಕ್ಕೂ ಒಪ್ಪದಿದ್ದವರಿಗೆ ಈಗ ನೀಡಿರುವ ಮುಂಗಡ ಹಣದಲ್ಲಿ ಶೇ.50ರಷ್ಟು ಹಣವನ್ನು ಮಾತ್ರ ಹಿಂದಿರುಗಿಸಲಿದ್ದು, ಇದಕ್ಕೆ ನಾಲ್ಕೈದು ತಿಂಗಳ ಕಾಲಾವಕಾಶ ನೀಡಬೇಕು. ಅಲ್ಲಿಯವರೆಗೂ ಮಾಲೀಕರಿಗೆ ತೊಂದರೆಯಾಗದಂತೆ ರಕ್ಷಣೆ ನೀಡಬೇಕು ಎಂದು ಸಂಘದಿಂದ ಮನವಿ ಮಾಡಲಾಗಿದೆ.
ನಗರದಲ್ಲಿ ಒಟ್ಟು 85 ಕಲ್ಯಾಣಮಂಟಪಗಳಿದ್ದು, ಈಗ ಎಲ್ಲರೂ ತೊಂದರೆಗೆ ಸಿಲುಕಿದ್ದಾರೆ. ಲಾಕ್‌ಡೌನ್‌ನಿಂದ ಮದುವೆ ರದ್ದಾಗಿರುವುದರಿಂದ ಕೊಟ್ಟಿರುವ ಮುಂಗಡ ಹಣ ವಾಪಸ್ ನೀಡುವಂತೆ ಒತ್ತಾಯಿಸುತ್ತಿದ್ದು, ಕೆಲವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹಣ ಈಗಾಗಲೇ ಖರ್ಚಾಗಿರುವುದರಿಂದ ನಮಗೂ ತೆರಿಗೆ ವಿನಾಯಿತಿ ನೀಡುವುದರ ಜತೆಗೆ ಶೇ.50ರಷ್ಟು ಹಣ ಹಿಂದಿರುಗಿಸಲು ಸಮಾಯಾವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಕೆ.ಆರ್.ಸತ್ಯನಾರಾಯಣ ಅಧ್ಯಕ್ಷರು, ಮೈಸೂರು ಕಲ್ಯಾಣಮಂಟಪ ಮಾಲೀಕರ ಸಂಘ