

ಅಳವಂಡಿ: ನಿಲೋಗಿಪುರ-ಹಲವಾಗಲಿ ಗ್ರಾಮಗಳಿಂದ ಅಳವಂಡಿಗೆ ಸಂಪರ್ಕ ಕಲ್ಪಿಸುವ ಹಿರೇಹಳ್ಳದ ನೆಲಮಟ್ಟದ ಸೇತುವೆ ಕಿತ್ತು ಹೋಗಿದ್ದು ಸಂಚಾರ ಕಷ್ಟಕರವಾಗಿದೆ. ಇದನ್ನು ಮನಗಂಡ ಗ್ರಾಮಸ್ಥರು ಈ ಸೇತುವೆಯನ್ನು ತಾತ್ಕಾಲಿಕವಾಗಿ ರಿಪೇರಿ ಮಾಡಿ ಸಂಚಾರ ಸುಗಮಗೊಳಿಸಿದ್ದಾರೆ.
ಹಲವು ವರ್ಷಗಳ ಹಿಂದೆ ಹಿರೇಹಳ್ಳಕ್ಕೆ ನೆಲಮಟ್ಟದ ಸೇತುವೆ ನಿರ್ಮಿಸಲಾಗಿದೆ. ಹಳ್ಳದ ಸೇತುವೆಯನ್ನು ಕಲ್ಲುಗಳಿಂದ ನಿರ್ಮಿಸಲಾಗಿದೆ. ಆದರೆ ಈ ಹಳ್ಳಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಕಲ್ಲುಗಳು ಕಿತ್ತು ದೊಡ್ಡ ಗುಂಡಿಗಳು ಬಿದ್ದು ಸಂಚಾರ ಕಷ್ಟಕರವಾಗಿದೆ.
ಹಲವಾಗಲಿ, ಕೇಸಲಾಪುರ, ನಿಲೋಗಿಪುರ ಮುಂತಾದ ಗ್ರಾಮಗಳ ಸಾರ್ವಜನಿಕರು ವಾಣಿಜ್ಯ ವಹಿವಾಟು, ಆಸ್ಪತ್ರೆ, ಶಾಲೆ-ಕಾಲೇಜು, ಬ್ಯಾಂಕ್ ವ್ಯವಹಾರ, ಬಿತ್ತನೆ ಬೀಜ ರಸಗೊಬ್ಬರಗಳಿಗೆ ಗ್ರಾಮಸ್ಥರು ಅಳವಂಡಿಗೆ ತೆರಳಲು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಆದರೆ ಪ್ರತಿ ಸಾರಿ ಮಳೆಯಾದಾಗಲೂ ಹಳ್ಳಕ್ಕೆ ನೀರು ಬರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ನೀರಿನ ಹರಿವು ಕಡಿಮೆಯಾಗುವವರೆಗೂ ಸಂಚಾರ ಸ್ಥಗಿತಗೊಳ್ಳುತ್ತದೆ. ಅಳವಂಡಿ ಗ್ರಾಮಕ್ಕೆ ಸುತ್ತು ಬಳಸಿ ಬರಬೇಕಾಗುತ್ತಿದೆ. ಭಾರಿ ವಾಹನಗಳು ಸಹ ಹಳ್ಳದ ಮಧ್ಯ ಸಿಲುಕಿಕೊಂಡ ಉದಾಹರಣೆ ಇದೆ. ಸರ್ಕಾರಿ ಬಸ್ ಇತ್ತೀಚೆಗೆ ಹಳ್ಳದ ಮಧ್ಯ ಸಿಲುಕಿಕೊಂಡು ಪರದಾಡಿದ್ದು ಇದೆ. ಈ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಲು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಹಳ್ಳದ ಕಲ್ಲುಗಳು ಕಿತ್ತು ಸಂಚಾರ ಬಂದ ಆಗಿರುವುದನ್ನು ಮನಗಂಡ ನಿಲೋಗಿಪುರ, ಹಲವಾಗಲಿ ಗ್ರಾಮಸ್ಥರು ತಮ್ಮ ಸ್ವಂತ ಹಣದಿಂದ ಜೆಸಿಬಿ, ಟ್ರ್ಯಾಕ್ಟರ್ ಮೂಲಕ ಕಲ್ಲುಗಳನ್ನು ಸರಿಪಡಿಸಿ ಸೇತುವೆಯನ್ನು ತಾತ್ಕಾಲಿಕವಾಗಿ ರಿಪೇರಿ ಮಾಡಿಸಿದ್ದಾರೆ.
ಪ್ರತಿ ಬಾರಿ ಹಳ್ಳಕ್ಕೆ ನೀರು ಬಂದಾಗ ಕಲ್ಲುಗಳು ಕಿತ್ತು ಸಂಚಾರ ಕಷ್ಟವಾಗುತ್ತಿದೆ. ಕಾರಣ ಸರ್ಕಾರ ಮೇಲ್ಮಟ್ಟದ ಸೇತುವೆಯನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಬೇಕೆಂಬುದು ವಿವಿಧ ಗ್ರಾಮಸ್ಥರ ಆಗ್ರಹವಾಗಿದೆ.