

ಮಂಡ್ಯ: ತಾಲೂಕಿನ ಬೂದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಅಕ್ರಮಗಳು ನಡೆಯುತ್ತಿದೆ ಎಂದು ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿ ಸಂಚಾಲಕ ಬಿ.ಕೆ.ಸತೀಶ್ ಆರೋಪಿಸಿದರು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಖಾಸಗಿ ಆಸ್ಪತ್ರೆಯ ಪಕ್ಕದಲ್ಲಿನ ಕೃಷಿ ಭೂಮಿಯನ್ನು ನಗರದ ಬ್ಯಾಂಕ್ ನೌಕರರ ಗೃಹನಿರ್ಮಾಣ ಮಂಡಳಿಯ ಸಂಘಕ್ಕೆ ಬಡಾವಣೆ ಮಾಡಲು ಗ್ರಾಪಂ ಪಿಡಿಒ ಅನ್ಯಕ್ರಾಂತ ಮಾಡಿಕೊಟ್ಟಿದ್ದಾರೆ. ಇದು ಕೃಷಿ ಭೂಮಿಯೆಂದು ಅರಿಯದ ಸಂಘದವರು ಈಗಾಗಲೇ ಅಲ್ಲಿ ಪಡೆದ ನಿವೇಶನಗಳನ್ನು ಮಾರಾಟ ಮಾಡಿದ್ದು, ಇದು ಈಗ ರಿಯಲ್‌ಎಸ್ಟೇಟ್ ದಂಧೆಕೋರರ ಪಾಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಬೆಂ-ಮೈ ಹೆದ್ದಾರಿಗೆ ಭೂ ಸ್ವಾಧೀನದ ಪರಿಹಾರ ಒದಗಿಸುವ ವೇಳೆ ನಕಲಿ ದಾಖಲೆ ಸೃಷ್ಟಿಸಿ ಪಕ್ಕದ ರಸ್ತೆಯನ್ನು ಪರಿಗಣಿಸದೇ ಹಾಗೂ ಸ್ವಾಧೀನ ಪಡಿಸಿಕೊಳ್ಳದ ಭೂಮಿಗೆ 41,41,000 ರೂ ಪರಿಹಾರ ನೀಡಲಾಗಿದೆ. ಈ ಸಂಬಂಧ ದಾಖಲೆಗಳು ನಮಗೆ ದೊರೆತಿದೆ ಎಂದು ತಿಳಿದೊಡನೆ ಪಿಡಿಒ ಮತ್ತು ಗ್ರಾ.ಪಂ ಅಧ್ಯಕ್ಷರು ನಮ್ಮ ಮೇಲೆ ದೂರು ದಾಖಲಿಸಿದ್ದಾರೆ. ಭೂಸ್ವಾಧೀನ ಪರಿಹಾರದ ವಿಷಯದಲ್ಲಿ ಅಕ್ರಮ ಎಸಗಿದ್ದು, ಜಿಲ್ಲಾಧಿಕಾರಿ ಕೂಡಲೇ ತಪ್ಪಿತಸ್ಥರನ್ನು ಬಂಧಿಸಬೇಕು. ಇಲ್ಲದೆ ಹೋದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಸಮಿತಿಯ ಸವಿತಾ, ಯಲ್ಲಮ್ಮ, ಮಹದೇವಮ್ಮ, ಶಿಲ್ಪಾ, ಸರೋಜಮ್ಮ ಇದ್ದರು.