

ಗಂಗಾವತಿ: ತಾಲೂಕಿನ ಸಣಾಪುರ ಗ್ರಾಪಂ ಕಚೇರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನ್‌ರಾಜ್ ಭಾನುವಾರ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಆಡಳಿತ ಮಂಡಳಿ ಮತ್ತು ಪಿಡಿಒ ಅವರೊಂದಿಗೆ ಸಭೆ ನಡೆಸಿ, ಅನುದಾನ ಸೇರಿ ಇತರೆ ವಿಷಯಗಳ ಕುರಿತು ಚರ್ಚಿಸಿದರು.
ಗ್ರಾಪಂ ಆಗಿ 9ವರ್ಷ ಕಳೆದಿದ್ದು, ಇದುವರಿಗೂ ಸ್ವಂತ ಕಟ್ಟಡವಿಲ್ಲ. ಗ್ರಂಥಾಲಯ ವ್ಯವಸ್ಥೆಯಿಲ್ಲ, ಮೂಲ ಸೌಕರ್ಯಗಳಿಲ್ಲ. ಸಣಾಪುರದ ಸ.ನಂ 34ರಲ್ಲಿ ಜಾಗವಿದ್ದು, ಹದ್ದುಬಸ್ತು ಮಾಡಿಕೊಟ್ಟರೇ ಗ್ರಾಪಂ ಕಚೇರಿ ಕಟ್ಟಡ ನಿರ್ಮಿಸಲಾಗುವುದು.
ಮೀಸಲು ವರ್ಗದ ಕುಟುಂಬಗಳ ಅನುಕೂಲಕ್ಕಾಗಿ ಆಶ್ರಯ ಯೋಜನೆಯಡಿ ಹೆಚ್ಚುವರಿ ಮನೆಗಳನ್ನು ಮಂಜೂರು ಮಾಡಬೇಕು. ಹುಲಿ-ಗಂಗಾವತಿ ಸಂಪರ್ಕ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ರಸ್ತೆ ಬದಿಯ ಬಡ ಕುಟುಂಬಗಳು ಮನೆ ಕಳೆದುಕೊಳ್ಳಲಿದ್ದು, ಹಳೇ ತಿರುಮಲಾಪುರದಲ್ಲಿ ನಿವೇಶಗಳನ್ನಾಗಿ ಮಾಡಿ ವಿತರಿಸಬೇಕು.
ನೀರಾವತಿ ಇಲಾಖೆಯ ಕಟ್ಟಡಗಳಿದ್ದು, ಉದ್ದೇಶಿತ ಸ್ಥಳದಲ್ಲಿ ಗ್ರಾಪಂ ಕಚೇರಿ ಕಟ್ಟಡ ನಿರ್ಮಿಸಿಲು ಅವಕಾಶ ನೀಡುವುದರ ಜತೆಗೆ ಅಗತ್ಯ ಅನುದಾನ ಮಂಜೂರು ಮಾಡುವಂತೆ ಗ್ರಾಪಂ ಆಡಳಿತ ಮಂಡಳಿ ಮನವಿ ಮಾಡಿದರು. ಮನವಿ ಸ್ವೀಕರಿಸಿದ ಕೆ.ಪಿ.ಮೋಹನರಾವ್ ಮಾತನಾಡಿ, ಸಭೆಯ ಮೂಲಕ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಗ್ರಾಪಂ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.