ಸಹಕಾರಿ ಬೆಳವಣಿಗೆಗೆ ಸ್ವಂತ ಕಟ್ಟಡ ಪೂರಕ

Own building complements cooperative growth
Own building complements cooperative growth
Published on

ಬಾದಾಮಿ: ನಗರದಲ್ಲಿನ ಶ್ರೀಶೈಲ ಮಲ್ಲಿಕಾರ್ಜುನ ಸೌಹಾರ್ದ ಸಹಕಾರಿ ಸಂಘದ ಕಟ್ಟಡ ನಿರ್ಮಾಣ ಮಾಡಿರುವುದು ಸಂತಸ ತಂದಿದೆ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.

ಪಟ್ಟಣದ ವಿದ್ಯಾನಗರದ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದ ಹತ್ತಿರ ಶ್ರೀಶೈಲ ಮಲ್ಲಿಕಾರ್ಜುನ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

ನಗರದಲ್ಲಿ ಸಮಾಜದ ಸಮುದಾಯ ಭವನ, ಸೌಹಾರ್ದ ಸಹಕಾರಿ ಸಂಘದ ಸ್ವಂತ ಕಟ್ಟಡ ಹೊಂದಿದ್ದು ಸಂತಸ. ಬರುವ ದಿನಮಾನಗಳಲ್ಲಿ ಸಂಘ ಉನ್ನತಮಟ್ಟಕ್ಕೆ ಬೆಳೆಯಲಿ ಎಂದು ಶುಭ ಕೋರಿದರು.

ಶಾಸಕ ಜೆ.ಟಿ. ಪಾಟೀಲ ಲಾಕರ್ ಅನ್ನು ಉದ್ಘಾಟಿಸಿ ಮಾತನಾಡಿ, ಸಂಘವು ಬಡವರಿಗೆ, ಹಿಂದುಳಿದ ವರ್ಗದವರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕು. ಸಾರ್ವಜನಿಕರು ಸಂಘದ ಸದುಪಯೋಗಪಡೆದುಕೊಳ್ಳಬೇಕು. ಮಹಿಳಾ ಶಾಖೆ ಪ್ರಾರಂಭ ಮಾಡಿರುವುದು ಶ್ಲಾಘನೀಯ ಎಂದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ, ಇಂದು ಸಹಕಾರಿ ಸಂಘ ನಡೆಸಿಕೊಂಡು ಹೋಗುವುದು ಸವಾಲಾಗಿದೆ. ಸಾಲ ಪಡೆದವರು ಸಕಾಲಕ್ಕೆ ಮರುಪಾವತಿ ಮಾಡಿ, ಸಹಕಾರಿ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ಹರಿಹರ ತಾಲೂಕಿನ ಎರೆಹೊಸಳ್ಳಿ ರಡ್ಡಿ ಗುರುಪೀಠದ ವೇಮನಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಂಘದ ಅಧ್ಯಕ್ಷ ವಿ.ಎಸ್.ದೇಸಾಯಿ ಅಧ್ಯಕ್ಷತೆ ವಹಿಸಿ ಸಂಘ ಬೆಳೆದು ಬಂದ ಕುರಿತು ಮಾತನಾಡಿದರು. ವೇದಿಕೆಯ ಮೇಲೆ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಜಿ.ಎನ್. ಪಾಟೀಲ, ಎಂ.ಎಸ್. ಗೌಡರ, ಸಿ.ವ್ಹಿ. ಪಾಟೀಲ, ಮಹಾಂತೇಶ ಮಮದಾಪೂರ, ಎಸ್.ಆರ್. ಮೆಳ್ಳಿ, ಕುಮಾರಗೌಡ ಜನಾಲಿ, ಎಸ್.ಟಿ. ಪಾಟೀಲ, ಬಿ.ಟಿ. ಬೆನಕಟ್ಟಿ, ಅಶೋಕ ಯಲಿಗಾರ, ಎಸ್.ಕೆ. ಬೆಳವಲದ, ಎಸ್.ಎಂ. ಕೆಲೂಡಿ ಇದ್ದರು.

ಎಸ್.ಎ.ಭರಮಗೌಡರ ಸ್ವಾಗತಿಸಿದರು. ಅಶೋಕ ಭಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಎಸ್. ಹೊಸಗೌಡರ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net