

ಹುಬ್ಬಳ್ಳಿ : ರಾಜ್ಯ ಸರ್ಕಾರ ಸರಿಯಾಗಿ ಹಣಕಾಸು ನಿರ್ವಹಣೆ ಮಾಡಲಾಗದೆ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಯುಪಿಎ ಅವಧಿಗಿಂತ ದುಪ್ಪಟ್ಟು ಅನುದಾನವನ್ನು ಈಗಿನ ಎನ್ಡಿಎ ಸರ್ಕಾರ ನೀಡಿದೆ ಎಂದು ಸಮರ್ಥಿಸಿಕೊಂಡರು.
ರಾಜ್ಯಗಳಿಗೆ ಅನುದಾನ ಹಂಚಿಕೆ ನಿರ್ಧರಿಸುವುದು ಕೇಂದ್ರ ಸರ್ಕಾರವಲ್ಲ, ಹಣಕಾಸು ಆಯೋಗ. ಅದು ನಿಗದಿಪಡಿಸಿದಷ್ಟು ಹಣವನ್ನು ಕೇಂದ್ರ ನೀಡಿದೆ ಎಂದು ಜೋಶಿ ಸಮಜಾಯಿಷಿ ನೀಡಿದರು.
2016-17ರಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೇ ಇದ್ದ ಹಣಕಾಸು ಆಯೋಗ ಅನುದಾನ ಹಂಚಿಕೆ ನಿಗದಿಪಡಿಸಿದೆ. ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎನಿಸಿದ್ದರೆ ಆಯೋಗದ ಮುಂದೆ ಆಗಲೇ ಸಮರ್ಪಕ ವಾದ ಮಂಡಿಸಬೇಕಿತ್ತು. ಆಗ ಧ್ವನಿ ಎತ್ತದೆ, ಈಗ ತಗಾದೆ ತೆಗೆಯುತ್ತಿದೆ ಎಂದು ತಿರುಗೇಟು ನೀಡಿದರು.
ತಮ್ಮ ಸರ್ಕಾರದಲ್ಲಿನ ಅಧಿಕಾರಿಗಳೇ ತಪ್ಪು ಮಾಡಿದ್ದಾರೆ ಎಂಬುದನ್ನು ಸಿಎಂ ಒಪ್ಪಿಕೊಂಡಿದ್ದಾರೆ ಎಂದ ಜೋಶಿ, ಈಗಲಾದರೂ ಹಣಕಾಸು ಆಯೋಗದ ಮುಂದೆ ಸರಿಯಾದ ವಾದ ಮಂಡಿಸಿ ಎಂದು ಸಲಹೆ ನೀಡಿದರು.
ಪ್ರತಿ ಐದು ವರ್ಷಕ್ಕೊಮ್ಮೆ ಹಣಕಾಸು ಆಯೋಗ ರಚಿಸುತ್ತಿದ್ದು, ಈಗ ಮತ್ತೊಮ್ಮೆ ರಚನೆ ನಡೆದಿದೆ. ಹೊಸ ಹಣಕಾಸು ಆಯೋಗದ ಮುಂದಾದರೂ ರಾಜ್ಯಕ್ಕೆ ಏನು ಬೇಕೆಂಬುದನ್ನು ಸರಿಯಾಗಿ ಮಂಡಿಸಿ ಎಂದು ಸಲಹೆ ನೀಡಿದರು.
ಯುಪಿಎ ಅವಧಿಯಲ್ಲಿ ಕರ್ನಾಟಕಕ್ಕೆ 49 ಸಾವಿರ ಕೋಟಿ ಗ್ರಾ್ಯಂಟೆಡ್ ಅನುದಾನ ಬಂದಿದ್ದರೆ, ಈಗಿನ ಎನ್ಡಿಎ ಸರ್ಕಾರ 3 ಲಕ್ಷ ಕೋಟಿ ಕೊಟ್ಟಿದೆ. ಇನ್ನೂ ರಾಜ್ಯದ ಪಾಲಿನ ತೆರಿಗೆ ಬಾಬ್ತು ಯುಪಿಎ ಸಕಾರ ಕೇವಲ 63 ಸಾವಿರ ಕೋಟಿ ಕೊಟ್ಟಿದ್ದರೆ, ನಮ್ಮ ಸರ್ಕಾರ. 3.25 ಲಕ್ಷ ಕೋಟಿ ತೆರಿಗೆ ಹಂಚಿಕೆ ಬಿಡುಗಡೆ ಮಾಡಿದೆ ಎಂದು ಹೇಳಿದರು.