

ಗುಂಡ್ಲುಪೇಟೆ: ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಅಧಿಕ ತೂಕದ ವಾಹನಗಳು ಸಂಚಾರ ಮಾಡುತ್ತಿದ್ದರೂ ಸಂಬಂಧಪಟ್ಟ ಸಾರಿಗೆ ಇಲಾಖೆ ಯಾವುದೇ ಕ್ರಮಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸಿದ್ದಾರೆ.
ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಇಟ್ಟಿಗೆ ಫ್ಯಾಕ್ಟರಿಗಳು ಹಾಗೂ ಬಿಳಿಕಲ್ಲು ಗಣಿಗಳಿಂದ ಪ್ರತಿದಿನವೂ ನೂರಾರು ಟ್ರ್ಯಾಕ್ಟರ್, ಟಿಪ್ಪರ್ ಹಾಗೂ ಲಾರಿಗಳು ನಿಗದಿತ ಪ್ರಮಾಣಕ್ಕಿಂತ ಅಧಿಕ ತೂಕದ ಮಣ್ಣು, ಮರಳು, ಕಲ್ಲು, ಜಲ್ಲಿ ತುಂಬಿಕೊಂಡು ಅತಿವೇಗವಾಗಿ ಸಾಗುತ್ತಿವೆ. 45-50 ಟನ್ ತೂಕದ ಕಲ್ಲು, ಜಲ್ಲಿ, ಮರಳು ಹೊತ್ತ ಟಿಪ್ಪರ್‌ಗಳು ಓಡಾಡುವುದರಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಎಲ್ಲ ರಸ್ತೆಗಳೂ ಬಹುತೇಕ ಹಾಳಾಗುತ್ತಿವೆ. ಟಿಪ್ಪರ್‌ಗಳು ಓಡಾಡುವ ರಸ್ತೆಗಳ ಡಾಂಬರುಗಳು ಕಿತ್ತು ಬಂದು ಎಲ್ಲೆಂದರಲ್ಲಿ ಹಳ್ಳಗುಂಡಿಗಳು ಬಿದ್ದಿವೆ.
ಆದರೆ, ಲೋಕೋಪಯೋಗಿ ಇಲಾಖೆಗೆ ಸೇರಿದ ಈ ಹಳೆಯ ರಸ್ತೆಗಳಲ್ಲಿ ಗರಿಷ್ಠ 10 ರಿಂದ 12 ಟನ್ ತೂಕದ ವಾಹನಗಳ ಸಂಚಾರಕ್ಕೆ ಮಾತ್ರ ಯೋಗ್ಯವಾಗಿದ್ದರೂ 45-50ಟನ್ ತೂಕದ ಟಿಪ್ಪರ್‌ಗಳ ಓಡಾಟ ನಿರಂತರವಾಗಿ ನಡೆಯುತ್ತಿದೆ. ಇದರಿಂದ ಕೊತ್ತಲವಾಡಿ, ಬೊಮ್ಮನಹಳ್ಳಿ, ತೆರಕಣಾಂಬಿ, ಗುಂಡ್ಲುಪೇಟೆ ರಸ್ತೆಯಲ್ಲಿ ದೊಡ್ಡ ದೊಡ್ಡ ಹಳ್ಳ ಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ಜಮೀನುಗಳಿಂದ ಕೆಮ್ಮಣ್ಣನ್ನು ಬಾಡಿ ಮಟ್ಟಕ್ಕಿಂತಲೂ ಎತ್ತರಕ್ಕೆ ತುಂಬಿಕೊಂಡು ಮೇಲೆ ಏನನ್ನೂ ಮುಚ್ಚದೆ ಇಟ್ಟಿಗೆ ಫ್ಯಾಕ್ಟರಿಗೆ ಸಾಗಿಸಲಾಗುತ್ತಿದೆ. ಇದರಿಂದ ಹೊರಚೆಲ್ಲಿದ ಧೂಳು ವಾಹನ ಸವಾರರ ಕಣ್ಣಿಗೆ ಬಿದ್ದು ತೊಂದರೆಯಾಗುತ್ತಿದೆ. ಕ್ರಷರ್‌ಗಳಿಂದ ಗ್ರಾಹಕರಿಗೆ ಎಂ-ಸ್ಯಾಂಡ್, ಜಲ್ಲಿಯನ್ನು ಸಾಗಿಸಲು ಟ್ರ್ಯಾಕ್ಟರು ಹಾಗೂ ಟ್ರಾೃಲಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೃಷಿ ಉದ್ದೇಶಕ್ಕೆ ತೆರಿಗೆ ವಿನಾಯಿತಿ ಪಡೆದ ಟ್ರ್ಯಾಕ್ಟರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿ ಹಾಡಹಗಲೇ ತೆರಿಗೆ ವಂಚಿಸುತ್ತಿದ್ದರೂ ಸಾರಿಗೆ ಇಲಾಖೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ.
ನಂಬರ್ ಪ್ಲೇಟ್ ಇಲ್ಲದ ವಾಹನಗಳು ಹೆದ್ದಾರಿಯಲ್ಲಿ ಪೊಲೀಸ್ ಠಾಣೆಗಳ ಎದುರಿನಲ್ಲಿ ರಾಜಾರೋಷವಾಗಿ ಓಡಾಡುತ್ತಿವೆ. ದ್ವಿಚಕ್ರ ವಾಹನಗಳ ಮೇಲೆ ಕ್ರಮಕೈಗೊಳ್ಳುವ ಪೊಲೀಸರು ಇಲ್ಲಿಯವರೆಗೆ ಇವುಗಳ ವಿರುದ್ಧ ಒಂದೇ ಒಂದು ಪ್ರಕರಣವನ್ನೂ ದಾಖಲಿಸಿಲ್ಲ. ಒಂದೇ ಪರ್ಮಿಟ್ ಬಳಸಿ ಗಣಿಗಳಿಂದ ಕಲ್ಲುಸಾಗಣೆ ಮಾಡುತ್ತಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಇತ್ತ ತಲೆಹಾಕುತ್ತಿಲ್ಲ.
ಕಳೆದ ಎರಡು ವರ್ಷಗಳಿಂದ ಶ್ರೀರಂಗಪಟ್ಟಣ ಸುತ್ತಮುತ್ತಲೂ ನಡೆಸುತ್ತಿದ್ದ ಗಣಿಗಾರಿಕೆಯನ್ನು ನಿಲ್ಲಿಸಿದ್ದರಿಂದ ತಾಲೂಕಿನ ಗಣಿಗಳಿಂದ ಜಿಲ್ಲೆಯ ಜತೆಗೆ ಮೈಸೂರಿನ ಕ್ರಷರುಗಳಿಗೂ ಅಗತ್ಯವಾದ ಕಲ್ಲು ಪೂರೈಕೆ ಮಾಡಲಾಗುತ್ತಿದೆ. ಕಳೆದ ವರ್ಷ ಮಡಹಳ್ಳಿ ಸಮೀಪದ ಗುಮ್ಮಕಲ್ಲುಗುಡ್ಡದಲ್ಲಿ ಕಲ್ಲು ಬಂಡೆಗಳ ಅಡಿ ಸಿಲುಕಿ ಮೂವರು ಕಾರ್ಮಿಕರು ಸಾವಿಗೀಡಾದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ಸ್ಥಗಿತಗೊಳಿಸಿದ್ದರಿಂದ ಕಟ್ಟಡ, ರಸ್ತೆ, ಸೇತುವೆ ಹಾಗೂ ಮನೆಗಳ ನಿರ್ಮಾಣ ಕಾಮಗಾರಿಗಳಿಗೆ ಮರಳು, ಜಲ್ಲಿ ಪೂರೈಸುವುದು ಕ್ರಷರುಗಳಿಗೆ ಸವಾಲಾಗಿದ್ದು, ಸಿಕ್ಕ ಸಿಕ್ಕಲ್ಲಿ ಹೊಸದಾಗಿ ಗಣಿಗಾರಿಕೆ ಆರಂಭಿಸಲಾಗಿದೆ. ಗ್ರಾಮಾಂತರ ಪ್ರದೇಶಗಳ ರೈತರ ಪಟ್ಟಾ ಜಮೀನುಗಳಲ್ಲಿ ಗಣಿಗಾರಿಕೆ ಆರಂಭವಾಗಿದೆ. ಮಡಹಳ್ಳಿ, ಹಸಗೂಲಿ, ಮಾದಲವಾಡಿ, ಬೇಗೂರು ಹೋಬಳಿಯ ಹಲವಾರು ಗ್ರಾಮಗಳಲ್ಲಿ ಸುಮಾರು 50ಕ್ಕೂ ಹೆಚ್ಚಿನ ಜಮೀನುಗಳಲ್ಲಿ ಗಣಿಗಾರಿಕೆ ಆರಂಭಿಸಲಾಗಿದೆ. ಇನ್ನೂ ಹಲವಾರು ಕಡೆಗಳಲ್ಲಿ ಹೊಸದಾಗಿ ಗಣಿ ಆರಂಭಿಸಲು ಗಣಿ ಇಲಾಖೆಯಿಂದ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ರಸ್ತೆ ನಿರ್ಮಾಣಕ್ಕೆ ಪ್ರತಿ ಕಿಲೋಮೀಟರಿಗೆ ಒಂದು ಕೋಟಿ ರೂ. ವೆಚ್ಚವಾಗುತ್ತಿದೆ. ಆದರೆ ಕೆಲವೇ ಉದ್ಯಮಿಗಳು ತಮ್ಮ ದುರಾಸೆಯಿಂದ ನಿಯಮಬಾಹಿರವಾಗಿ ಅಧಿಕ ತೂಕದ ಸರಕು ಸಾಗಣೆ ಮಾಡುವ ಮೂಲಕ ರಸ್ತೆಗಳನ್ನು ಹಾಳು ಮಾಡಿ ಸರ್ಕಾರದ ಅನುದಾನಗಳನ್ನು ವ್ಯರ್ಥಗೊಳಿಸುತ್ತಿದ್ದಾರೆ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಿಯಮಬಾಹಿರವಾಗಿ ಗಣಿಗಾರಿಕೆ ಹಾಗೂ ಕಲ್ಲು ಸಾಗಣೆ ನಡೆಯುತ್ತಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪ್ರಾದೇಶಿಕ ಸಾರಿಗೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ತಾಲೂಕಿನಲ್ಲಿ ಗಣಿಗಾರಿಕೆ ನಡೆಸುತ್ತಿರುವ ಕೆಲವೇ ಉದ್ಯಮಿಗಳ ಹಿತ ಕಾಪಾಡುತ್ತಿದ್ದಾರೆ. ಕೆಲವೇ ಜನರ ಹಿತಾಸಕ್ತಿಯಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ರಸ್ತೆಗಳು ಹಾಳಾಗುತ್ತಿವೆ. ಅಲ್ಲದೇ, ಸಾರ್ವಜನಿಕರ ತೆರಿಗೆಯ ಹಣ ಪೋಲಾಗುತ್ತಿದ್ದು, ಕೂಡಲೇ ಇದನ್ನು ತಡೆಗಟ್ಟಲು ಕ್ರಮಕೈಗೊಳ್ಳಬೇಕು.ಸಂಪತ್ತು ರೈತ ಮುಖಂಡ, ಕುಂದಕೆರೆ.
ಕಾಲ ಕಾಲಕ್ಕೆ ಸಾರಿಗೆ ಅಧಿಕಾರಿಗಳು ಭೇಟಿ ನೀಡಿ ಓವರ್ ಲೋಡ್ ಸೇರಿದಂತೆ ಸಾರಿಗೆ ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ್ದರಿಂದ ಭೇಟಿ ವಿರಳವಾಗಿದ್ದು, ಇದನ್ನು ಮತ್ತಷ್ಟು ಹೆಚ್ಚಿಸಲಾಗುವುದು.ಸುಧಾಮಣಿ ಪ್ರಾದೇಶಿಕ ಸಾರಿಗೆ ಅಧಿಕಾರಿ, ಚಾಮರಾಜನಗರ.