ಜಲಮೂಲ ಪರಿಸ್ಥಿತಿ ಅವಲೋಕನ

Aghanashini
Published on

ಕುಮಟಾ: ಅಘನಾಶಿನಿ ನದಿ ತೀರದ ಹಳ್ಳಿಗಳಿಗೆ ವೃಕ್ಷಲಕ್ಷ ಆಂದೋಲನದ ತಜ್ಞರ ತಂಡವು ಭೇಟಿ ನೀಡಿ ಜಲಮೂಲಗಳ ಪರಿಸ್ಥಿತಿಯ ಅವಲೋಕನ ಮಾಡಿದೆ. ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ, ನಗರಸಭೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದೆ.

ಅಘನಾಶಿನಿ ಉಳಿಸಿ ರೈತ ಹೋರಾಟ ಸಮಿತಿ ಆಹ್ವಾನದ ಮೇರೆಗೆ ನಡೆದ ಅಧ್ಯಯನದಲ್ಲಿ ಸರ್ಕಾರದ ಜೀವ ವೈವಿಧ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಎಂ.ಡಿ. ಸುಭಾಸ ಚಂದ್ರನ್, ವನ್ಯಜೀವಿ ಅಧ್ಯಯನಕಾರ ಡಾ. ಬಾಲಚಂದ್ರ ಸಾಯಿಮನೆ, ಕಡಲ ವಿಜ್ಞಾನಿ ಡಾ. ಪ್ರಕಾಶ ಮೇಸ್ತ, ಬೇಡ್ತಿ-ಅಘನಾಶಿನಿಕೊಳ್ಳ ಸಂರಕ್ಷಣ ಸಮಿತಿಯ ನಾರಾಯಣ ಗಡೀಕೈ, ವೃಕ್ಷ ಆಂದೋಲನದ ಸಂಚಾಲಕ ಗಣಪತಿ ಕೆ. ಬಿಸಲಕೊಪ್ಪ ಹಾಗೂ ಅಘನಾಶಿನಿ ನದಿ ನೀರಿನ ಪರಿಸ್ಥಿತಿ ಕುರಿತು ಸಂಶೋಧನೆ ನಡೆಸುತ್ತಿರುವ ಹಲವು ಸಂಶೋಧಕರು ತಜ್ಞರ ತಂಡದಲ್ಲಿದ್ದರು.

ದೊಡ್ಮನೆ, ಬಡಾಳ, ಸಂತೇಗುಳಿ, ದೀವಳ್ಳಿ, ಮರಾಕಲ್, ಮೂರೂರು, ಕಂದವಳ್ಳಿ, ಬೊಗ್ರಿಬೈಲ್, ಉಪ್ಪಿನಪಟ್ಟಣಗಳಿಗೆ ತಂಡ ಭೇಟಿ ನೀಡಿತು. ಗ್ರಾಮೀಣ ಮುಖಂಡರು, ಕುಮಟಾ ಪುರಸಭೆ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರ ಜತೆಯೂ ಸಮಾಲೋಚನೆ ನಡೆಸಿದೆ.

ಸರ್ಕಾರಕ್ಕೆ ಸಲಹೆ

ಸಮೀಕ್ಷೆಯ ಬಳಿಕ ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡಿರುವ ತಂಡವು, ಅಘನಾಶಿನಿ ನದಿ ಕಣಿವೆಯ ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಅಘನಾಶಿನಿ ನದಿಯಿಂದ ನೀರೆತ್ತಿ ಪೈಪ್‌ಲೈನ್ ಮೂಲಕ ಸಾಗಿಸುವ ಬೃಹತ್ ಯೋಜನೆಗಳಿಗಿಂತ ಸ್ಥಳೀಯ ಜಲಮೂಲ ಸಂರಕ್ಷಣೆ, ಸುಸ್ಥಿರ ಬಳಕೆ ಯೋಜನೆಗಳನ್ನು ಪಂಚಾಯಿತಿ ಮಟ್ಟದಲ್ಲಿ ರೂಪಿಸುವುದು ಅಪೇಕ್ಷಣೀಯ. ನೀರಿನ ಯೋಜನೆಗಳು ಅರಣ್ಯನಾಶ, ಭೂಕುಸಿತಕ್ಕೆ ಕಾರಣವಾಗಬಾರದು. ನದಿ, ಜಲಾನಯನ ಸಂರಕ್ಷಣೆಯಾಗಬೇಕು. ಅಘನಾಶಿನಿ ನದಿಯ ಅಳಿವೆಗಳು, ಮೀನುಗಾರಿಕೆ, ಅಳಿವೆಗಳ ಉತ್ಪನ್ನ ನಾಶವಾಗದಂತೆ ತಡೆಯಲು ನದಿಯ ಹರಿವು ಬೇಕೇಬೇಕು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಲ್ಲಿ ಸಮಗ್ರ ಜಲನಿರ್ವಹಣೆ, ಸುಸ್ಥಿರ ಬಳಕೆಯ ಯೋಜನೆ ಆಗುವಂತೆ ಡಿಪಿಆರ್‌ನಲ್ಲಿ ಅಗತ್ಯ ಬದಲಾವಣೆ ಮಾಡಬೇಕು ಎಂದು ಪರಿಸರ, ಕೃಷಿ, ಜಲ ತಜ್ಞರು ಸರ್ಕಾರದ ಗಮನ ಸೆಳೆದಿದ್ದಾರೆ. 15 ವಷರ್ದ ಹಿಂದೆ ಶಿರಸಿಗೆ ನೀರು ಸಾಗಿಸುವ ಯೋಜನೆಗೆ ತೀವ್ರ ವಿರೋಧ ಪ್ರಕಟವಾದಾಗ ಅಘನಾಶಿನಿ ನದಿಯಲ್ಲಿ 3ನೇ ಎರಡು ಭಾಗ ನೀರು ಹರಿದು ಹೋಗಲು, ಅವಕಾಶ ಕಲ್ಪಿಸುವ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂಬ ಸಂಗತಿಯನ್ನು ತಜ್ಞರು ನೆನಪಿಸಿದ್ದಾರೆ.

ಇಲ್ಲಿ ಜಾರಿಯಾಗುವ ಯೋಜನೆಗಳ ಪಾರದರ್ಶಕತೆ, ಜನರ ಸಹಭಾಗಿತ್ವ ಇರಬೇಕು. ಅರಣ್ಯ, ಜೀವವೈವಿಧ್ಯ, ಪಂಚಾಯತ ರಾಜ್ ಕಾಯ್ದೆಗಳಿಗೆ ಭಂಗ ಬರಬಾರದು. ಅಘನಾಶಿನಿ ನದಿಯ ದೀವಳ್ಳಿ ಜಲಮೂಲ ಕೈಬಿಟ್ಟು ಬೊಗ್ರಿಬೈಲ್ ಸ್ಥಳದಿಂದ ನೀರೆತ್ತಬೇಕು ಎಂಬ ಅಘನಾಶಿನಿ ಜನತೆಯ ಮತ್ತು ತಜ್ಞರ ಅಭಿಪ್ರಾಯವನ್ನು ಸರ್ಕಾರ ಮಾನ್ಯ ಮಾಡಬೇಕು ಎಂದು ತಂಡ ವರದಿಯಲ್ಲಿ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net