ಆಸ್ಪತ್ರೆಗೆ ನುಗ್ಗಿದ ನೀರು, ಪರದಾಡಿದ ರೋಗಿಗಳು

hnl
Published on

ಹೊನ್ನಾಳಿ: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಮಂಗಳವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆ ನೀರು ನುಗ್ಗಿ ಐಸಿಯು, ಆಪರೇಷನ್ ಕೊಠಡಿ ಹಾಗೂ ಡಯಾಲಿಸಿಸ್ ಕೇಂದ್ರ, ವಾರ್ಡ್‌ಗಳಲ್ಲಿದ್ದ ರೋಗಿಗಳು ಇಡೀರಾತ್ರಿ ಪರದಾಡಿದರು.

ಮಳೆ ಬಂದ ಪರಿಣಾಮ ಎತ್ತರ ಪ್ರದೇಶದಲ್ಲಿದ್ದ ತಾಲೂಕು ಕ್ರೀಡಾಂಗಣ ಹಾಗೂ ತುಂಗಭದ್ರಾ ಬಡಾವಣೆಯಿಂದ ಹಾಗೂ ಹಲವು ಕಡೆಗಳಿಂದ ಬಿರುಸಿನಿಂದ ಬಂದ ಮಳೆ ನೀರು ಏಕಾಏಕಿ ತಗ್ಗು ಪ್ರದೇಶದಲ್ಲಿದ್ದ ಆಸ್ಪತ್ರೆಗೆ ನುಗ್ಗಿತು.

ತಕ್ಷಣ ಎಚ್ಚೆತ್ತ ಆಸ್ಪತ್ರೆ ಸಿಬ್ಬಂದಿ ಮಳೆ ನೀರನ್ನು ಹೊರಹಾಕುವಲ್ಲಿ ಮುಂದಾದರು. ನಂತರ ವೈದ್ಯರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದ್ದ ಹಾಗೂ ಐಸಿಯುನಲ್ಲಿದ್ದ ರೋಗಿಗಳನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಿದರು. ಇನ್ನ್ನುಳಿದ ನೆಲ ಹಂತಸ್ತಿನ ಒಳ ರೋಗಿಗಳನ್ನು ಮೇಲಂತಸ್ತಿನ ವಾರ್ಡ್‌ಗಳಿಗೆ ಶಿಫ್ಟ್ ಮಾಡಿದರು.
ಸದ್ಯಕ್ಕಿಲ್ಲ ಶಸ್ತ್ರಚಿಕಿತ್ಸೆ, ಐಸಿಯು ಸೇವೆ: ಒಟಿ, ಐಸಿಯು ಕೊಠಡಿಗೆ ಮಳೆ ನೀರು ನುಗ್ಗಿದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಶಸ್ತ್ರ ಚಿಕಿತ್ಸೆ, ಐಸಿಯು ಘಟಕ ಬಳಕೆಗೆ ಲಭ್ಯವಿಲ್ಲ. ಇದಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ, ವರದಿ ಕೊಟ್ಟ ನಂತರ ಸೇವೆ ಪುನಃ ಆರಂಭಿಸಲಾಗುವುದು. ಅಲ್ಲಿವರೆಗೆ ಸಾರ್ವಜನಿಕರು ಸಹಕರಿಸುವಂತೆ ಸ್ಥಾನಿಕ ವೈದ್ಯಾಧಿಕಾರಿ ಡಾ.ಚಂದ್ರಪ್ಪ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net