ರಾತ್ರೋರಾತ್ರಿ ರಾಜೇಂದ್ರಶ್ರೀಗಳ ಪ್ರತಿಮೆ ಸ್ಥಾಪನೆ: ಅರಸು ಮಂಡಳಿಯಿಂದ ಕಾನೂನು ಹೋರಾಟ

Statue of Rajendrashri
Published on

ಮೈಸೂರು: ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಪ್ರತಿಮೆಯನ್ನು ನಗರದ ಗನ್‌ಹೌಸ್ ಬಳಿಯ ವೃತ್ತದಲ್ಲಿ ರಾತ್ರೋರಾತ್ರಿ ಇಟ್ಟಿರುವುದು ಖಂಡನೀಯ. ಈ ಕುರಿತು ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದು ಅರಸು ಮಂಡಳಿ ತಿಳಿಸಿದೆ.


ರಾಜೇಂದ್ರ ಶ್ರೀಗಳ ಪ್ರತಿಮೆಯನ್ನು ರಾತ್ರಿಯ ವೇಳೆ ಕದ್ದು ಇರಿಸುವ ಮೂಲಕ ಅವರನ್ನು ಅಪಮಾನಿಸಲಾಗಿದೆ. ಇದು ಜೆಎಸ್‌ಎಸ್ ಸಂಸ್ಥೆಗೆ ಮಾಡಿದ ಅಪಮಾನ ಸಹ ಆಗಿದೆ ಎಂದು ಮಂಡಳಿಯ ಪದಾಧಿಕಾರಿ ಅಮರನಾಥ ರಾಜೇ ಅರಸ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನವ್ಯಕ್ತಪಡಿಸಿದರು.


ರಾಜೇಂದ್ರ ಶ್ರೀಗಳ ಪ್ರತಿಮೆ ಸ್ಥಾಪನೆಗೆ ಯಾವುದೇ ಸ್ಪಷ್ಟ ದಾಖಲಾತಿ ಇಲ್ಲ. ಇದು ಮೈಸೂರಿಗೆ ಅವಮಾನ ಮಾಡುವ ಕೆಲಸ. ಇದನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.


ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಿಲ್ಲ. ಮಠ ಬೆಳೆದಿರುವುದು ಅರಮನೆಯಿಂದಲೇ ಹೊರತು ಮಠದಿಂದ ಅರಮನೆ ಬೆಳೆದಿಲ್ಲ. ಕೋರ್ಟ್ ಆದೇಶ ಬಂದಿದ್ದಲ್ಲಿ ಯಾವುದೇ ಪ್ರತಿಮೆ ನಿರ್ಮಾಣಕ್ಕೆ ನಾವು ಒಪ್ಪಿಕೊಳ್ಳುತ್ತೇವೆ. ಆದರೂ ಈಗ ಅದನ್ನು ಹೊರತು ಪಡಿಸಿ ನಡೆದಿರುವ ಕಾರ್ಯದ ವಿರುದ್ಧ ಹೋರಾಟ ಕೈಗೊಳ್ಳಲಾಗುವುದು. ಈ ವೃತ್ತದಲ್ಲಿ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.


ರಾಜಮನೆತನದವರ ಪ್ರತಿಮೆ ಇರಿಸಲು ಸಾಧ್ಯವಾಗದಿದ್ದರೆ ಚಾಮುಂಡೇಶ್ವರಿದೇವಿಯ ಮೂರ್ತಿ ಇರಿಸಬೇಕು. ಬದಲಾಗಿ ಯಾವುದೋ ಒಂದು ಸಮಿತಿ ಸೇರಿಕೊಂಡು ಪ್ರತಿಮೆ ಇರಿಸುವುದನ್ನು ತಾವು ವಿರೋಧಿಸುವುದಾಗಿ ತಿಳಿಸಿದರು.

ಮಂಡಳಿಯ ಮುಖಂಡರಾದ ಶ್ರೀಧರ್ ರಾಜೇ ಅರಸು, ಜೈದೇವ್ ಅರಸು, ಶ್ರೀಕಾಂತ್ ರಾಜೇ ಅರಸು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net