

ಚಾಮರಾಜನಗರ: ನಗರದ ತಾಲೂಕು ಪಂಚಾಯಿತಿ ಹಿಂಭಾಗದಲ್ಲಿರುವ ಭಗೀರಥ ನಗರದಲ್ಲಿ ನೀರಿನ ಓವರ್ ಹೆಡ್‌ಟ್ಯಾಂಕ್ ಕುಸಿದುಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.
50,000 ಲೀಟರ್ ಸಾಮರ್ಥ್ಯದ ಈ ನೀರಿನ ಟ್ಯಾಂಕ್ ಕೆಲ ವರ್ಷಗಳಿಂದ ಶಿಥಿಲಗೊಂಡಿತ್ತು. ಭಾನುವಾರ ಮುಂಜಾನೆ 3ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಅಕ್ಕಪಕ್ಕದಲ್ಲೆ ಮನೆಗಳಿದ್ದು, ಮನೆಗಳ ಮೇಲೆ ಕುಸಿದುಬಿದ್ದಿದ್ದರೆ ಪ್ರಾಣಹಾನಿ ಸಂಭವಿಸುತ್ತಿತ್ತು.
ಶಿಥಿಲಾವಸ್ಥೆಯಿಂದ ಕೂಡಿದ್ದರೂ ಟ್ಯಾಂಕ್ ಚಾಲ್ತಿಯಲ್ಲಿತ್ತು. ಪ್ರತಿ ದಿನ ನೀರು ತುಂಬಿಸಿ ಸರಬರಾಜು ಮಾಡಲಾಗುತ್ತಿತ್ತು. ಪಕ್ಕದಲ್ಲೇ ನೂತನ ಟ್ಯಾಂಕ್ ನಿರ್ಮಾಣವಾಗಿದ್ದು, ಚಾಲನೆ ದೊರೆಯುವ ಹಂತದಲ್ಲಿತ್ತು. ಶಿಥಿಲಗೊಂಡಿರುವ ಈ ನೀರಿನ ಟ್ಯಾಂಕ್‌ಅನ್ನು 3 ವರ್ಷಗಳ ಹಿಂದೆಯೇ ಕೆಡವುವಂತೆ ಜಿಲ್ಲಾಧಿಕಾರಿ, ಶಾಸಕ, ನಗರಸಭಾ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.