

ಸೋಮವಾರಪೇಟೆ: ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಶಾಂತಳ್ಳಿ ಹೋಬಳಿಯ ಗ್ರಾಮಗಳಲ್ಲಿ ಹೆಚ್ಚಿನ ಮಳೆ ಸುರಿಯುತ್ತಿದೆ. ನದಿ ತೊರೆಗಳು ಉಕ್ಕಿ ಹರಿಯುತ್ತಿವೆ. ಅಲ್ಲಲ್ಲಿ ಮರಗಳು ಬಿದ್ದು ಹಾನಿಯಾಗುತ್ತಿದೆ. ಬರೆ ಕುಸಿದು ಹಾನಿಯಾಗುತ್ತಿದೆ. ಕಾಫಿ ಕಾಯಿ ಉದುರುತ್ತಿದ್ದು ಕಾಫಿ ಬೆಳೆಗಾರರಲ್ಲಿ ಬೆಳೆ ನಷ್ಟದ ಭೀತಿ ಎದುರಾಗಿದೆ.
ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಬ್ಬೆಟ್ಟ ಅಯ್ಯಪ್ಪ ಕಾಲನಿಯಲ್ಲಿ ಬಾಬು ಮತ್ತು ಜಾನಕಿ ಅವರ ಮನೆಗಳ ಮುಂದೆ ಬರೆ ಕುಸಿದಿದೆ. ಕಳೆದ ವರ್ಷವೇ ಚೌಡ್ಲು ಗ್ರಾಮ ಪಂಚಾಯಿತಿಗೆ ಅಪಾಯದ ಮುನ್ಸೂಚನೆ ಕುರಿತು ಅರ್ಜಿ ಸಲ್ಲಿಸಲಾಗಿತ್ತು. ಪ್ರಸಕ್ತ ಸಾಲಿನ ಮಳೆಯಿಂದಾಗಿ ಬರೆ ಸಂಪೂರ್ಣ ಕುಸಿಯುವ ಹಂತದಲ್ಲಿದೆ.
ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯ ಹಿತ್ಲುಮಕ್ಕಿಯಲ್ಲಿ ತಡೆಗೋಡೆ ಕುಸಿದು ರಸ್ತೆಗೆ ಸಂಚಕಾರವಾಗಿದ್ದು, ವಾಸದ ಮನೆ ಅಪಾಯಕಾರಿ ಸ್ಥಿತಿಯಲ್ಲಿದೆ. ಹಿತ್ಲುಮಕ್ಕಿ ಗ್ರಾಮದ ಸುಂದರಮ್ಮ ಅವರಿಗೆ ಸೇರಿದ ವಾಸದ ಮನೆಯ ಪಕ್ಕದಲ್ಲೇ ನಿರ್ಮಿಸಿದ್ದ ತಡೆಗೋಡೆ ಕುಸಿದಿದೆ. ಕಳೆದ ಮೂರು ದಿನಗಳ ಹಿಂದಷ್ಟೇ ಸಣ್ಣ ಪ್ರಮಾಣದಲ್ಲಿ ಕುಸಿದಿದ್ದ ತಡೆಗೋಡೆ ಇಂದು ಭಾಗಶಃ ಕುಸಿತಗೊಂಡಿದ್ದು, ವಾಸದ ಮನೆಗೆ ಅಪಾಯ ತಂದೊಡ್ಡಿದೆ.
ಇದೇ ಸ್ಥಳದಲ್ಲಿ ಶ್ರೀಕೊರಗಜ್ಜ ದೇವಾಲಯವೂ ಇದ್ದು, ಪೂಜೆಯ ದಿನಗಳಲ್ಲಿ ನೂರಾರು ಮಂದಿ ಭಾಗವಹಿಸುತ್ತಾರೆ. ಅಬ್ಬೂರು ಕಟ್ಟೆಯಿಂದ ಅರೆಯೂರು ಸಂಪರ್ಕಿಸುವ ರಸ್ತೆಯಲ್ಲಿರುವ ತಿರುವಿನಲ್ಲಿ ನಿರ್ಮಿಸಿದ ತಡೆಗೋಡೆ ಮಳೆಗೆ ಕುಸಿದಿದೆ. ತಡೆಗೋಡೆಯ ಕಲ್ಲುಗಳು ರಸ್ತೆಗೆ ಬಿದ್ದಿದ್ದು, ಸ್ಥಳೀಯರು ಕಲ್ಲನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಕೊಟ್ಟಿದ್ದಾರೆ. ರಸ್ತೆ, ಮನೆ ಹಾಗೂ ದೇವಾಲಯದ ಹಿತದೃಷ್ಟಿಯಿಂದ ತಕ್ಷಣ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.