ಜಲದಿಂದ ಜನಜೀವನ ಅಸ್ತವ್ಯಸ್ತ

traffic disruptions
ಗಂಗಾವತಿಯ ಅರಿಹಂತ ಕಾಲನಿ ಸಂಪರ್ಕ ರಸ್ತೆಯಲ್ಲಿ ಮಳೆ ನೀರು ನಿಂತಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿತ್ತು.
Published on

ಗಂಗಾವತಿ: ತಾಲೂಕಿನಾದ್ಯಂತ ಭಾನುವಾರ ರಾತ್ರಿ ಸುರಿದ ಮಳೆಯಿಂದ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಚರಂಡಿ ತ್ಯಾಜ್ಯವೆಲ್ಲ ರಸ್ತೆ ಮೇಲೆ ಸಂಗ್ರಹವಾಗಿತ್ತು.

ಗುಡುಗು, ಗಾಳಿ, ಸಿಡಿಲು ಸಹಿತ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬೆಟ್ಟದ ಪ್ರದೇಶದ ನೀರು ನಗರದ ಚರಂಡಿಗೆ ನುಗ್ಗಿದ್ದರಿಂದ ಬಹುತೇಕ ಚರಂಡಿಗಳು ತುಂಬಿ ಹರಿದಿವೆ. ಗಾಂಧಿ ವೃತ್ತದ ರಸ್ತೆಯಲ್ಲಿ ನೀರು ನಿಂತಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿತ್ತು. ಮಹೆಬೂಬ್‌ನಗರ, ಪಂಪಾನಗರ ಗುಡ್ಡದ ಕ್ಯಾಂಪ್, ಎಚ್‌ಆರ್‌ಎಸ್ ಕಾಲನಿ ಮತ್ತು ಮುಜಾವರ್ ಕ್ಯಾಂಪ್‌ಗಳಲ್ಲಿ ಚರಂಡಿ ನೀರು ಕೆಲ ಮನೆಗಳಿಗೆ ನುಗ್ಗಿದ್ದರಿಂದ ವಿಷ ಜಂತುಗಳ ಕಾಟ ಹೆಚ್ಚಾಗಿತ್ತು.

ಕಂದಾಯ ಭವನ, ಬಸವಣ್ಣ ವೃತ್ತ, ಅರಿಹಂತ ಕಾಲನಿಯ ರಸ್ತೆಯಲ್ಲಿ ನೀರು ನಿಂತಿದ್ದು, ಸುಗಮ ಸಂಚಾರಕ್ಕೆ ಪೌರ ಕಾರ್ಮಿಕರು ಹರಸಾಸಹ ನಡೆಸಿದರು. ಗಾಳಿಯಿಂದ ಬಹುತೇಕ ವಿದ್ಯುತ್ ಪರಿವರ್ತಕಗಳು ಟ್ರಿಪ್ ಆಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಮಳೆಯಿಂದ ತತ್ತರಿಸಿದ ಬೀದಿ ದನಗಳು ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಆಶ್ರಯ ಪಡೆದುಕೊಂಡಿದ್ದವು. ಮಳೆಯಿಂದ ಕುಡಿವ ನೀರಿನ ಪೈಪ್‌ಲೈನ್ ಹಾಳಾಗಿದ್ದು, ನಗರಸಭೆಯಿಂದ ದುರಸ್ತಿ ಕಾಮಗಾರಿ ಮುಂದುವರಿದಿದೆ.

ಎಲ್ಲೆಲ್ಲಿ ಎಷ್ಟು ಮಳೆ: ತಾಲೂಕಿನ ವೆಂಕಟಗಿರಿಯಲ್ಲಿ 21.3 ಮಿ.ಮೀ., ಗಂಗಾವತಿಯಲ್ಲಿ 30.8 ಮಿ.ಮೀ., ವಡ್ಡರಹಟ್ಟಿಯಲ್ಲಿ 54 ಮಿ.ಮೀ. ಮತ್ತು ಪ್ರಗತಿನಗರದಲ್ಲಿ 22.3 ಮಿ.ಮೀ.ಮಳೆಯಾದ ಬಗ್ಗೆ ವರದಿಯಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net