

ಬಳ್ಳಾರಿ: ಸುಕೋ ಬ್ಯಾಂಕ್ 2023-24 ರ ಆರ್ಥಿಕ ವರ್ಷದಲ್ಲಿ 1,114 ಕೋಟಿ ರೂ. ಠೇವಣಿ ಸಂಗ್ರಹಿಸಿ ಗುರಿ ಮೀರಿದ ಸಾಧನೆ ಮಾಡಿದೆ ಎಂದು ಬ್ಯಾಂಕ್ ಅಧ್ಯಕ್ಷ ಮೋಹಿತ್ ಮಸ್ಕಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಆರ್ಥಿಕ ಸಾಲಿನಲ್ಲಿ ಶೇ. 19.86 ಪ್ರಗತಿ ಸಾಧಿಸಿ 6.23 ಕೋಟಿ ರೂ. ಮೊತ್ತದ ಲಾಭಾಂಶ ಗಳಿಸಲಾಗಿದೆ. ಮುಂದಿನ ವರ್ಷದಲ್ಲಿ 1800 ಕೋಟಿ ರೂ. ಠೇವಣಿ ಸಂಗ್ರಹ ಹಾಗೂ 850 ಕೋಟಿ ರೂ. ಸಾಲದ ವಿತರಣೆ ಗುರಿ ಹೊಂದಲಾಗಿದೆ. ಬ್ಯಾಂಕ್‌ನಲ್ಲಿ ಈವರೆಗೆ ಒಟ್ಟು 1,828 ಕೋಟಿ ರೂ. ವಹಿವಾಟು ನಡೆದಿದೆ ಎಂದರು.
ಎಲ್ಲ ಶಾಖೆಗಳಲ್ಲಿ 11,901 ಮಹಿಳಾ ಗ್ರಾಹಕರಿಗೆ 156 ಕೋಟಿ ರೂ. ಸಾಲ ನೀಡಲಾಗಿದೆ. ಈ ಆರ್ಥಿಕ ಸಾಲಿನಿಂದ ಗ್ರಾಹಕರಿಗೆ ಡಿಜಿಟಲ್ ವ್ಯವಸ್ಥೆಯಲ್ಲಿ ಸಾಲ ಮಂಜೂರಾತಿ ಮಾಡುವ ಪ್ರಕ್ರಿಯೆ ಆರಂಭಿಸಲಾಗುವುದು. ವಿವಿಧ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಲೈಫ್ ಇನ್ಶೂರೆನ್ಸ್ ಹಾಗೂ ಇತರ ಸೌಲಭ್ಯ ಒದಗಿಸಲಾಗುವುದು. ಗ್ರಾಹಕರಿಗೆ ಬ್ಯಾಂಕ್ ಸಮಸ್ಯೆಗಳನ್ನು ವಾಟ್ಸಾೃಪ್, ಫೇಸ್ಬುಕ್ ಹಾಗೂ ಶಾಖೆಗಳಲ್ಲಿ ದೂರು ಸಲ್ಲಿಸಿದಲ್ಲಿ ತ್ವರಿತವಾಗಿ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು. ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಜಿ.ಎಸ್.ರವಿ ಸುಧಾಕರ್, ಪ್ರಧಾನ ವ್ಯವಸ್ಥಾಪಕರಾದ ಟಿ.ಎನ್.ಈಶ್ವರನ್, ಶ್ರೀನಿವಾಸರಾವ್ ಅಂಬೇಕರ್ ಇದ್ದರು.