

ಯಲ್ಲಾಪುರ: ಕಾರ್ವಿುಕ ಇಲಾಖೆಯಡಿ ಕಾರ್ವಿುಕ ಕಲ್ಯಾಣ ಮಂಡಳಿಯಿಂದ ಸರ್ಕಾರದ ಅನುದಾನದಿಂದ ನಡೆಯುತ್ತಿರುವ ನೂತನನಗರದ ಶಿಶುಪಾಲನಾ ಕೇಂದ್ರದ ಮಕ್ಕಳಿಗೆ ಪೌಷ್ಟಿಕಾಂಶದ ಕೊರತೆ ನೀಗಿಸಬೇಕು ಎಂದು ಆಗ್ರಹಿಸಿ ಮಕ್ಕಳ ಪಾಲಕರು ತಹಸೀಲ್ದಾರ್ ಎಂ. ಗುರುರಾಜ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮಕ್ಕಳಿಗೆ ಪೌಷ್ಟಿಕ ಆಹಾರದ ಕೊರತೆ ಉಂಟಾಗಿದೆ. ಸರ್ಕಾರ ಹೆಚ್ಚಿನ ಅನುದಾನ ನೀಡಿ ಕೇಂದ್ರವನ್ನು ಮುನ್ನಡೆಸಿಕೊಂಡು ಹೋಗಲು ಸಹಕರಿಸಬೇಕು. ಸರ್ಕಾರ ಶಿಶುಪಾಲನಾ ಕೇಂದ್ರಗಳನ್ನು ಮುಚ್ಚುತ್ತದೆ ಎಂಬ ವದಂತಿ ಇದ್ದು, ಅಂತಹ ನಿರ್ಧಾರ ಕೈಗೊಳ್ಳಬಾರದು. ನೂತನನಗರ ಶಿಶುಪಾಲನಾ ಕೇಂದ್ರದಲ್ಲಿ 40ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದು ಕೇಂದ್ರ ಮುಚ್ಚಿದರೆ ಮಕ್ಕಳಿಗೆ ಸಮಸ್ಯೆ ಉಂಟಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕೇಂದ್ರದ ಅಧ್ಯಕ್ಷ ಗಣೇಶ ಪಾಟಣಕರ್, ಉಪಾಧ್ಯಕ್ಷೆ ಸಂಜನಾ ಮರಾಠಿ, ಪಪಂ ಮಾಜಿ ಅಧ್ಯಕ್ಷ ಎಂ.ಡಿ. ಮುಲ್ಲಾ, ಶ್ರೀನಿವಾಸ ಹೇಂದ್ರೆ ಇತರರಿದ್ದರು.