ಸವಾಲುಗಳನ್ನು ಮೆಟ್ಟಿ ಸಾಧಕರಾಗಿ

FotoJet (1)
Published on

ಶಾಸಕ ಡಾ.ಎಚ್​.ಡಿ.ರಂಗನಾಥ್​ ಹೇಳಿಕೆ

ಕುಣಿಗಲ್​: ಪ್ರಯತ್ನದಿಂದ ಮಾತ್ರ ಕಠಿಣ ಸವಾಲು ಗೆಲ್ಲಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಪ್ರಾಯೋಗಿಕ ಚಿಂತನೆಗಳು ಅಗತ್ಯ ಎಂದು ಶಾಸಕ ಡಾ.ಎಚ್​.ಡಿ.ರಂಗನಾಥ್​ ತಿಳಿಸಿದರು.

ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಭಾರತೀಯ ಸ್ಕೌಟ್ಸ್​ ಮತ್ತು ಗೈಡ್ಸ್​ ಜಿಲ್ಲಾ ಶಾಖೆ ಹಾಗೂ ಐ.ಕ್ಯೂ.ಎ.ಸಿ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ರೋವರ್ಸ್​, ರೇಂರ್ಜಸ್​ಗಳ ನಿಪುಣ್​ ಪರೀಕ್ಷಾ ಶಿಬಿರ ಮತ್ತು ರಾಜ್ಯ ಪುರಸ್ಕಾರ್​ ಪೂರ್ವ ಸಿದ್ಧತೆಯ 2 ದಿನಗಳ ಪರೀಕ್ಷಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಶಿಬಿರಗಳಲ್ಲಿ ಭಾಗವಹಿಸುವುದರಿಂದ ನಾಯಕತ್ವ ಗುಣ, ಜೀವನದಲ್ಲಿ ಎದುರಾಗುವ ಸಮಸ್ಯೆಗಳ ಪರಿಹರಿಸಿಕೊಳ್ಳುವ ಕೌಶಲ, ಸಂಕಷ್ಟಕ್ಕೆ ಸ್ಪಂದಿಸುವ ಮನಸ್ಥಿತಿ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ಸಮುದಾಯ ಸೇವೆಗೆ ಪ್ರತಿಫಲಾಪೇಕ್ಷೆ ಇಲ್ಲದೇ ದುಡಿಯಿರಿ. ಮಹಾತ್ಮ ಗಾಂಧಿ, ಡಾ.ಬಿ.ಆರ್​.ಅಂಬೇಡ್ಕರ್​ ಅಂತಹ ಮೇರು ಸಾಧಕರು, ಸವಾಲುಗಳನ್ನು ಮೆಟ್ಟಿ ಸಾಧಕರಾಗಿದ್ದಾರೆ. ಇಂತಹ ಸಾಧಕರ ಜೀವನ ಚರಿತ್ರೆ ಅಧ್ಯಯನ ಮಾಡಿ ಎಂದು ತಿಳಿಸಿದರು.

ನಿವೃತ್ತ ಡಿಡಿಪಿಐ ಟಿ.ಎಸ್​.ಅಂಜನಪ್ಪ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಪುಸ್ತಕದ ಜ್ಞಾನ ಕರಗತ ಮಾಡಿಕೊಳ್ಳುವ ಜತೆ ಹೊರಜಗತ್ತಿನ ವಿದ್ಯಮಾನಗಳ ಅರಿವು ಗಳಿಸಬೇಕು. ಅಂಕಗಳಿಕೆ ಜತೆ ಜೀವನ ಗೆಲ್ಲುವ ಕೌಶಲ ಕಲಿಯಬೇಕು. ದೇಶಭಕ್ತಿ, ದೇಶಪ್ರೇಮ ಮೈಗೂಡಿಸಿಕಂಡು ದೇಶಸೇವೆಗೆ ಸಿದ್ಧರಾಗಿರಬೇಕು ಎಂದರು.

ಸ್ಕೌಟ್ಸ್​ ಮತ್ತು ಗೈಡ್ಸ್​ ಜಿಲ್ಲಾ ತರಬೇತಿ ಆಯುಕ್ತ ಗಂಗಾಧರ ಮಾತನಾಡಿ, ದೇಶದ ಪ್ರಗತಿಗೆ ಮೌಲ್ಯಯುತ ಶಿಕ್ಷಣ ಅಡಿಪಾಯ ಹಾಕಿದೆ. 1907ರಲ್ಲಿ ಬೆಡೆನ್​ ಪೋವೆಲ್​ ಸ್ಥಾಪಿಸಿದ ಸ್ಕೌಟ್ಸ್​ ಮತ್ತು ಗೈಡ್ಸ್​ ವಿಶ್ವದ 216 ದೇಶಗಳಲ್ಲಿ ಲಕ್ಷಾಂತರ ಯುವ ಜನರನ್ನು ಶಿಸ್ತುಬದ್ಧ, ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುತ್ತಿದೆ ಎಂದರು.

ಕಾಲೇಜಿನ ರೋವರ್ಸ್​ ಲೀಡರ್​ ಡಾ.ಎನ್​.ಟಿ.ಶ್ರೀನಿವಾಸ ಮಾತನಾಡಿ, ಕಾಲೇಜು ಹಂತದಲ್ಲಿ ಪುರುಷ ವಿದ್ಯಾರ್ಥಿಗಳಿಗೆ ರೋವರ್ಸ್​ ಮತ್ತು ಮಹಿಳೆಯರಿಗೆ ರೇಂರ್ಜಸ್​ ತಂಡಗಳನ್ನು ರಚಿಸಿ ಅವರಲ್ಲಿ ಮೌಲ್ಯಶಿಕ್ಷಣ, ಶಿಬಿರಗಳು, ಚಾರಣ, ಪ್ರವಾಹ, ಭೂಕಂಪನದಂತ ಸಂದರ್ಭಗಳಲ್ಲಿ ಆಂತರಿಕ ಯೋಧರನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ನಿಪುಣ್​, ರಾಜ್ಯಪುರಸ್ಕಾರ್​ ಶಿಬಿರಗಳಲ್ಲಿ ಭಾಗವಹಿಸಿ ಎಂದರು.

ಪ್ರಾಂಶುಪಾಲ ರಾಮಾಂಜನಪ್ಪ ಮಾತನಾಡಿ, ವ್ಯಕ್ತಿತ್ವ ವಿಕಸನಕ್ಕೆ ಶಿಬಿರಗಳು ಪೂರಕ. ಹೊಸತನ್ನು ಅರಸಿ, ಪ್ರಕೃತಿ ಮಡಿಲಲ್ಲಿ ಶಿಕ್ಷಣ, ನಾಯಕತ್ವ ಗುಣ, ಸಮುದಾಯ ಸೇವೆ ಮಾಡಿ ನಿಸ್ವಾರ್ಥ ಮನೋಭಾವ ಬೆಳೆಸಿಕೊಳ್ಳಿ ಎಂದರು.

ಐ.ಕ್ಯೂ.ಎ.ಸಿ. ಸಂಚಾಲಕ ಡಾ.ಟಿ.ಎನ್​.ನರಸಿಂಹಮೂರ್ತಿ, ಡಾ.ಶಿವಕುಮಾರ್​, ರವಿಕುಮಾರ್​, ಜಿಲ್ಲಾ ಸಂಘಟಕ ನವೀನಕುಮಾರ್​, ಶಿಬಿರ ನಾಯಕರಾದ ವಿನಯ್​, ವಿದ್ಯಾ, ಬಸವರಾಜು, ವ್ಯವಸ್ಥಾಪಕ ಚಲುವಮೂರ್ತಿ, ಸಾಂಸತಿಕ ಸಮಿತಿ ಸಂಚಾಲಕ ಈಶ್ವರಪ್ಪ, ಡಾ.ಮಂಜುಳಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net