

ವಿಜಯವಾಣಿ ಸುದ್ದಿಜಾಲ ಉಡುಪಿ
ನಗರದ ಅಜ್ಜರಕಾಡುನಲ್ಲಿರುವ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ.ಪೂ. ಕಾಲೇಜುಗಳ ಬಾಲಕ-ಬಾಲಕಿಯರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಗಮನಾರ್ಹ ದಾಖಲೆಯೊಂದಿಗೆ ಸಮಗ್ರ ಚಾಂಪಿಯನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪೂರ್ಣಿಮಾ ಉದ್ದ ಜಿಗಿತದಲ್ಲಿ ದ್ವಿತೀಯ, ತ್ರಿವಿಧ ಜಿಗಿತದಲ್ಲಿ ಪ್ರಥಮ ಹಾಗೂ 200 ಮೀ. ಓಟದಲ್ಲಿ ಪ್ರಥಮ ಸ್ಥಾನ ಗಳಿಸಿ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾಳೆ.
ಮಾನ್ಯಾ ಆರ್. 400 ಮೀ. ಹರ್ಡಲ್ಸ್ನಲ್ಲಿ ಪ್ರಥಮ, 400 ಮೀ. ಓಟದಲ್ಲಿ ದ್ವಿತೀಯ, ಅನನ್ಯಾ ತ್ರಿವಿಧ ಜಿಗಿತದಲ್ಲಿ ದ್ವಿತೀಯ, ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ ಗಳಿಸಿದ್ದಾಳೆ. ನಿಖಿತಾ 800 ಮೀ. ಮತ್ತು 400 ಮೀ. ಓಟದಲ್ಲಿ ಪ್ರಥಮ, ಜಯಲಕ್ಷ್ಮೀ 3000 ಮೀ. ಓಟದಲ್ಲಿ ದ್ವಿತೀಯ, 1,500 ಮೀ. ಮತ್ತು 800 ಮೀ. ಓಟದಲ್ಲಿ ತೃತೀಯ ಸ್ಥಾನ ಗಳಿಸಿದ್ದಾಳೆ. ರಕ್ಷಿತಾ ಎತ್ತರ ಜಿಗಿತದಲ್ಲಿ ಪ್ರಥಮ, ಅಶ್ವಿನಿ 200 ಮೀ. ಓಟದಲ್ಲಿ ದ್ವಿತೀಯ, ನೈಮಿಷಾ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ.
ಪೂರ್ಣಿಮಾ, ಮಾನ್ಯಾ ಆರ್., ನಿಖಿತಾ, ಜಯಲಕ್ಷ್ಮೀ ಮತ್ತು ಅಶ್ವಿನಿ ಅವರನ್ನೊಳಗೊಂಡ ರಿಲೇ ತಂಡ 4×100 ಹಾಗೂ 4×400 ಮೀ. ರಿಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಜಿಲ್ಲಾ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಚಾಂಪಿಯನ್ ಆಗಿದ್ದಲ್ಲದೆ, ಮೈಸೂರಿನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಮಂಜುನಾಥ ಭಟ್ ಮಾಹಿತಿ ನೀಡಿದ್ದಾರೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ತಂಡವನ್ನು ಪ್ರಾಂಶುಪಾಲರು ಮತ್ತು ಶಿಕ್ಷಣ ಸೇವಾ ಸಮಿತಿಯವರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.