

ಮೈಸೂರು: ಜ್ಯೋತಿನಗರದ ಡಿಎಆರ್ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಪುರುಷರ ವಿಭಾಗದಲ್ಲಿ ಡಿಎಆರ್‌ನ ಜಿ.ಜಿ. ರಘುನಂದನ, ಮಹಿಳಾ ವಿಭಾಗದಲ್ಲಿ ಬೈಲುಕುಪ್ಪೆ ಪೊಲೀಸ್ ಠಾಣೆಯ ಎಚ್.ಎಸ್. ಅಶ್ವಿತಾ ಸರ್ವೋತ್ತಮ ಪ್ರಶಸ್ತಿ ಪಡೆದರು.
ಒಟ್ಟು 75 ಅಂಕಗಳನ್ನು ಪಡೆದ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಸಮಗ್ರ ಪ್ರಶಸ್ತಿ ಪಡೆದುಕೊಂಡಿತು. ಜಿ.ಜಿ. ರಘುನಂದನ 100 ಮೀ., 200 ಮೀ., 400 ಮೀ. ಓಟ, ಉದ್ದಜಿಗಿತದಲ್ಲಿ ಪ್ರಥಮ ಹಾಘೂ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು 23 ಅಂಕಗಳನ್ನು ಕಲೆಹಾಕಿ ಸರ್ವೋತ್ತಮ ಪ್ರಶಸ್ತಿ ಪಡೆದರು.
ಎಚ್.ಎಸ್. ಅಶ್ವಿತಾ 100 ಮೀ. ಓಟ, ಡಿಸ್ಕಸ್ ಥ್ರೋ, ಶಾಟ್‌ಪುಟ್, ಜಾವಲಿನ್ ಥ್ರೋನಲ್ಲಿ ಪ್ರಥಮ, 200 ಮೀ. ಓಟ, ಉದ್ದ ಜಿಗಿತದಲ್ಲಿ ದ್ವಿತೀಯ ಬಹುಮಾನ ಪಡೆದು 26 ಅಂಕಗಳನ್ನು ಕಲೆಹಾಕಿ ಸರ್ವೋತ್ತಮ ಪ್ರಶಸ್ತಿ ಪಡೆದರು.
ಕಾರ್ಯಕ್ರಮದಲ್ಲಿ ದಕ್ಷಿಣ ವಲಯ ಡಿಐಜಿ ಡಾ.ಎಂ.ಬಿ. ಬೋರಲಿಂಗಯ್ಯ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಇದ್ದರು.