

ಪೊಲೀಸ್ ಕಾನ್ಸ್ಟೇಬಲ್, ಲಿಖಿತ ಪರೀಕ್ಷೆ, 7 ಸಾವಿರ ಅಭ್ಯರ್ಥಿಗಳು, Police constable, written test, 7 thousand candidates,
ಹುಬ್ಬಳ್ಳಿ: ಪೊಲೀಸ್ ಇಲಾಖೆ ವತಿಯಿಂದ ಹುಬ್ಬಳ್ಳಿ- ಧಾರವಾಡ ಅವಳಿ ನಗರದ 35 ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ಜರುಗಿದ ಪೊಲೀಸ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆಗೆ ಬರೋಬ್ಬರಿ 7 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಹಾಜರಾಗಿದ್ದರು.
ವಿಶೇಷ ಮೀಸಲು ಕಾನ್ಸ್ಟೇಬಲ್ (ಕೆಎಸ್ಆರ್ಪಿ, ಐಆರ್ಬಿ) ವಿಭಾಗದ ಪುರುಷ ಮತ್ತು ಮಹಿಳಾ ಹುದ್ದೆಗಳ ಲಿಖಿತ ಪರೀಕ್ಷೆಗೆ 7,900 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಪರೀಕ್ಷೆಗೂ ಮುನ್ನ ಪರೀಕ್ಷಾರ್ಥಿಗಳನ್ನು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಲಾಯಿತು. ಪರೀಕ್ಷಾ ಕೇಂದ್ರದ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. 200 ಮೀ ಸುತ್ತ ಸಿಆರ್ಪಿಸಿ ಕಲಂ 144 ಅನ್ವಯ ನಿಷೇಧಿತ ಪ್ರದೇಶವೆಂದು ಘೊಷಿಸಲಾಗಿತ್ತು. ನಗರದ ಸಿ.ಐ. ಮುನವಳ್ಳಿ ಪಾಲಿಟೆಕ್ನಿಕ್ ಕಾಲೇಜ್, ಎಂ.ಆರ್. ಸಾಖರೆ ಇಂಗ್ಲಿಷ್ ಮೀಡಿಯಂ ಶಾಲೆ, ಪಿ.ಸಿ. ಜಾಬಿನ ಸೈನ್ಸ್ ಕಾಲೇಜ್, ಕಾಡಸಿದ್ದೇಶ್ವರ ಆರ್ಟ್ಸ್ ಕಾಲೇಜು, ಮಹಿಳಾ ವಿದ್ಯಾಪೀಠ, ಧಾರವಾಡದ ಕಿಟೆಲ್ ಸೈನ್ಸ್ ಕಾಲೇಜ್, ಬಾಸೆಲ್ ಮಿಷನ್ ಶಾಲೆ ಸೇರಿ ಮತ್ತಿತರ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಶಾಂತಿಯುತವಾಗಿ ನಡೆಯಿತು.
ಸಂಚಾರ ದಟ್ಟಣೆ: ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗಾಗಿ ವಾಕರಸಾ ಸಂಸ್ಥೆಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಳಗಾವಿ, ಶಿರಸಿ, ಯಲ್ಲಾಪುರ, ಕಾರವಾರ, ದಾವಣಗೆರೆ, ಶಿವಮೊಗ್ಗ ಸೇರಿ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚುವರಿ ಬಸ್ ಬಿಡಲಾಗಿತ್ತು. ಸಾವಿರಾರು ಅಭ್ಯರ್ಥಿಗಳು ಪರೀಕ್ಷೆ ಬಳಿಕ ಮಧ್ಯಾಹ್ನ ಬಸ್ ನಿಲ್ದಾಣಗಳಲ್ಲಿ ಜಮೆಯಾಗಿದ್ದರಿಂದ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.