

ಮಂಡ್ಯ: ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ ವಸತಿ ಶಾಲೆ ಮತ್ತು ಹಾಸ್ಟೆಲ್ಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಪ್ರತಿ ತಿಂಗಳು 5ರೊಳಗೆ ವೇತನ ಪಾವತಿಯಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಹಾಸ್ಟೆಲ್ ಹಾಗೂ ಕಾಲೇಜುಗಳ ಹೊರಗುತ್ತಿಗೆ ಸಿಬ್ಬಂದಿ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊರಗುತ್ತಿಗೆ ಟೆಂಡರ್ ಪಡೆದಿರುವ ಏಜೆನ್ಸಿಗಳು ಇಲಾಖೆಯಿಂದ ಬಿಲ್ ಪಾವತಿಯಾದ ನಂತರ ಸಂಬಳ ಪಾವತಿ ಮಾಡುವುದಿಲ್ಲ. ಆದರೆ ಪ್ರತಿ ತಿಂಗಳು 5ರೊಳಗೆ ವೇತನ ಪಾವತಿ ಮಾಡಬೇಕೆನ್ನುವುದು ಟೆಂಡರ್‌ನಲ್ಲಿರುವ ಷರತ್ತು ಇದೆ ಎಂದರು.
ಇಲಾಖೆ ಏಜೆನ್ಸಿಗಳಿಗೆ ಬಿಲ್ ಪಾವತಿ ಮಾಡುವ ಮೊದಲು ಸಿಬ್ಬಂದಿಗೆ ಇ.ಎಸ್.ಐ, ಪಿ.ಎಫ್ ಪಾವತಿ ಮಾಡಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು. ಮಾತ್ರವಲ್ಲದೆ ದಾಖಲಾತಿ ಪಡೆದುಕೊಳ್ಳಬೇಕು. ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಏಜೆನ್ಸಿ ಅವರು ವೇತನ ಸಂದಾಯ ರಶೀದಿ ನೀಡಬೇಕು. ವಸತಿ ನಿಲಯಗಳ ಮೇಲ್ವಿಚಾರಕರು ತಮ್ಮ ವ್ಯಾಪ್ತಿಗೆ ಬರುವ ಸಿಬ್ಬಂದಿಗೆ ವೇತನ ಪಾವತಿಯಾಗಿರುವುದನ್ನು ಖಾತ್ರಿ ಪಡಿಸಿಕೊಳ್ಳಿ. ಇದರಿಂದ ಬಹಳಷ್ಟು ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಸಲಹೆ ನೀಡಿದರು.
ವಸತಿ ನಿಲಯಗಳಲ್ಲಿ ಅಡುಗೆ ಸಿಬ್ಬಂದಿಗೆ ಅಡುಗೆ ತಯಾರು ಮಾಡುವ ಪರಿಕರಗಳಾದ ಚಪಾತಿ ಒತ್ತುವ ಯಂತ್ರ, ರುಬ್ಬುವ ಯಂತ್ರ ಇತ್ಯಾದಿಗಳನ್ನು ಸರ್ಕಾರ ನಿಗದಿಪಡಿಸಿರುವ ನಿಯಮದಂತೆ ಒದಗಿಸಬೇಕು. ಅದರಂತೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿ. ವಿದ್ಯಾರ್ಥಿಗಳು ಸೇವಿಸುವ ಪ್ರಮಾಣದಲ್ಲಿ ಶುಚಿ, ರುಚಿ ಹಾಗೂ ಬಿಸಿಯಾದ ಆಹಾರ ನೀಡಿ. ಆಹಾರವನ್ನು ವ್ಯರ್ಥ ಮಾಡಬೇಡಿ. ಹೊರಗುತ್ತಿಗೆ ಸೇವೆ ನೀಡುವ ಏಜೆನ್ಸಿಗಳು ನಿಯಮದಂತೆ ಕಾರ್ಯನಿರ್ವಹಿಸದಿದ್ದಲ್ಲಿ ಅವರಿಗೆ ನೋಟಿಸ್ ನೀಡಿ, ಅಮಾನತು ಮಾಡಿ ಕಪ್ಪುಪಟ್ಟಿಗೆ ಸೇರಿಸಿ ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ.ಸಿದ್ದಲಿಂಗೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೃಷ್ಣಕುಮಾರ್, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಮಧುಶ್ರೀ ಸೇರಿದಂತೆ ವಿವಿಧ ಸಂಘಟನೆಗಳ ಮುಖ್ಯಸ್ಥರು ಇದ್ದರು.