

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಸಾರಿಗೆ ನಿಗಮಗಳಲ್ಲಿ 2016ರಿಂದ 2023ರವರೆಗೆ ನೇಮಕಾತಿ ನಡೆದಿರಲಿಲ್ಲ. ಹಾಗಾಗಿ ಹೊರಗುತ್ತಿಗೆ ಅಧಾರದಲ್ಲಿ ನೇಮಕ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬಂದ ಮೇಲೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದೇವೆ. ಅನುಕಂಪದ ಆಧಾರದ ಸುಮಾರು ಒಂದು ಸಾವಿರ ಹುದ್ದೆಗಳು ಸೇರಿ 10 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡಿದ್ದೇವೆ. ಹಂತ ಹಂತವಾಗಿ ಹೊರ ಗುತ್ತಿಗೆ ನೇಮಕಾತಿಗೆ ಕಡಿವಾಣ ಆಗಲಿದೆ ಎಂದರು.
ಸಾರಿಗೆ ನೌಕರರ ವೇತನ ಪರಿಷ್ಕರಣೆ ವಿಷಯದಲ್ಲಿ ಹಿಂದಿನ ಸರ್ಕಾರ ಮಾಡಿದ ತಾಂತ್ರಿಕ ಲೋಪದಿಂದ ಸಮಸ್ಯೆಯಾಗಿದೆ. 2023ರಲ್ಲಿ 1-1-2023ರಿಂದ ವೇತನ ಪರಿಷ್ಕರಣೆ ಎಂದಾಗಬೇಕಿತ್ತು. ಆದರೆ, ಹಿಂದಿನ ಬಿಜೆಪಿ ಸರ್ಕಾರ 1-1-2021 ಎಂದು ಆದೇಶ ಮಾಡಿತ್ತು. ಈ ಕುರಿತು ಮುಖ್ಯಂತ್ರಿಯವರು ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಶಕ್ತಿ ಯೋಜಯಡಿ 593 ಕೋಟಿ ಬಾರಿ ಮಹಿಳೆಯರು ಪ್ರಯಾಣಿಸಿದ್ದು, 15200 ಕೋಟಿ ರೂ. ಖರ್ಚಾಗಿದೆ. ಹಿಂದಿನ ಸರ್ಕಾರ ಸಾರಿಗೆ ಇಲಾಖೆಗಾಗಿ 4 ಸಾವಿರ ಕೋಟಿ ಸಾಲ ಮಾಡಿತ್ತು. ನಮ್ಮ ಸರ್ಕಾರ ಬಂದ ಮೇಲೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 2 ಸಾವಿರ ಕೋಟಿ ಹಾಗೂ ಹೊಸ ಬಸ್ ಖರೀದಿಗೆ 800 ಕೋಟಿ ರೂ. ನೀಡಿದೆ ಎಂದರು.