ಹೊರಗುತ್ತಿಗೆ ಅರಣ್ಯರಕ್ಷಕರಿಗೆ ಇಲ್ಲವೇ ರಕ್ಷಣೆ...?

Untitled-2
ದೊಡ್ಡಬಳ್ಳಾಪುರದ ಅರಣ್ಯ ಇಲಾಖೆಯ ಕಚೇರಿ ಮುಂದೆ ದಿನಗೂಲಿ ನೌಕರರನ್ನು ಹೊರಗುತ್ತಿಗೆ ನೀಡಿರುವುದನ್ನು ಖಂಡಿಸಿ ಮೌನ ಪ್ರತಿಭಟನೆ ನಡೆಸಿದರು. ಯುವ ಸಂಚಲನದ ಚಿದಾನಂದ ಮೂರ್ತಿ,ದಿನಗೂಲಿ ನೌಕರರಾದ ದೇವರಾಜು, ನಾರಾಯಣಪ್ಪ, ಮುತ್ತುರಾಜು, ಚಿಕ್ಕಪೂಜಪ್ಪ, ಮುನಿರಾಜು, ಶಂಕರಪ್ಪ, ನಾಗರಾಜು ಇತರರು ಇದ್ದರು.
Published on

ದೊಡ್ಡಬಳ್ಳಾಪುರ : ಅರಣ್ಯ ರಕ್ಷಣೆ ದಿನಗೂಲಿ ನೌಕರರನ್ನು ಇಲಾಖೆ ಏಕಾಏಕಿ ಹೊರಗುತ್ತಿಗೆಗೆ ನೀಡಿರುವುದನ್ನು ಖಂಡಿಸಿ ನೌಕರರು ಮಂಗಳವಾರ ಪಟ್ಟಣದ ಅರಣ್ಯ ಇಲಾಖೆ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದರು. ಜೀವದ ಹಂಗು ತೊರೆದು ಅರಣ್ಯ ರಕ್ಷಣೆ ಮಾಡುತ್ತಿದ್ದ ದಿನಗೂಲಿ ನೌಕರರು ಇಂದಲ್ಲ ನಾಳೆ ಹುದ್ದೆ ಕಾಯಂ ಮಾಡುತ್ತಾರೆ ಎಂಬ ಆಸೆಯಲ್ಲಿದ್ದರು. ಆದರೆ, ಏಕಾಏಕಿ ಹೊರಗುತ್ತಿಗೆಗೆ ನೀಡಿರುವುದು ಬೇಸರ ತಂದಿದೆ ಎಂದು ಪ್ರತಿಭಟನಾನಿರತರು ಅಳಲು ತೋಡಿಕೊಂಡರು.

ದೊಡ್ಡಬಳ್ಳಾಪುರ ವಲಯ ಅರಣ್ಯಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ 14 ಜನರು 25&30 ವರ್ಷದಿಂದ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಈವರೆಗೂ ನಮೂನೆ&ಎಫ್​ಎ.ಸಿ&63 ಯಲ್ಲಿ ಸಂಬಳ ಪಡೆಯುತ್ತಿದ್ದರು. ಈಗ ಅರಣ್ಯ ಇಲಾಖೆಯು 14 ದಿನಗೂಲಿ ನೌಕರರನ್ನು ತೆಗೆದು ಹಾಕಿ ಹೊರಗುತ್ತಿಗೆಗೆ ನೀಡಿದೆ. ಅರಣ್ಯ ಇಲಾಖೆಯ ಈ ನಿರ್ಧಾರ ನೌಕರರ ಬದುಕನ್ನು ಅತಂತ್ರ ಮಾಡಿದೆ. ದಿನಗೂಲಿ ನೌಕರ ಮಂಜುನಾಥ್​ ನಾಯ್ಕ್​ ಮಾತನಾಡಿ, ದಿನಗೂಲಿ ನೌಕರರಿಗೆ ಸದ್ಯ ತಿಂಗಳ ಸಂಬಳ ಅವರ ಬ್ಯಾಂಕ್​ ಖಾತೆಗೆ ನೇರವಾಗಿ ಹಾಕಲಾಗುತ್ತಿದೆ. ಇದರಿಂದ ಅಧಿಕಾರಿಗಳಿಗೆ ಹಣ ದೋಚಲು ಅಸಾಧ್ಯವಾಗಿದೆ. ಹಣ ದೋಚುವ ಕಾರಣಕ್ಕೆ ಹೊರಗುತ್ತಿಗೆ ಜಾರಿ ಮಾಡಿದ್ದಾರೆ. ಹೊರಗುತ್ತಿಗೆಯವರನ್ನು ಕೇಳಿದರೆ ಅರಣ್ಯ ಇಲಾಖೆಯ ಜವಾಬ್ದಾರಿ ಎನ್ನುತ್ತಾರೆ. ಅರಣ್ಯ ಇಲಾಖೆ ಕೇಳಿದರೆ ಹೊರಗುತ್ತಿಗೆ ನೌಕರರೆಂದು ಸಬೂಬು ಹೇಳುತ್ತಾರೆ ಎಂದರು.

ದಿನಗೂಲಿ ನೌಕರ ಸದಾನಂದಮೂರ್ತಿ ಮಾತನಾಡಿ, 1998ರಲ್ಲಿ ೇಮಾಭಿವೃದ್ಧಿಯಡಿ ದಿನಗೂಲಿ ನೌಕರರನ್ನು ಕಾಯಂ ಮಾಡಿದ್ದರು. ಈ ವೇಳೆ ನಮ್ಮ ಬಳಿ ಅಗತ್ಯ ದಾಖಲೆ ಇರಲಿಲ್ಲ. 2013ರಲ್ಲಿ ನಮ್ಮ ಬಳಿ ಅನುಭವ ಮತ್ತು ಸೂಕ್ತ ದಾಖಲೆ ಇದ್ದರೂ, ನಮ್ಮನ್ನು ಕಾಯಂ ಮಾಡಲಿಲ್ಲ. ಈಗ ಏಕಾಏಕಿ ಕೆಲಸದಿಂದ ತೆಗೆದಿದ್ದಾರೆ. ಅರಣ್ಯ ಇಲಾಖೆಯ ರಾತ್ರೋರಾತ್ರಿ ನಿರ್ಧಾರದಿಂದ ನಮ್ಮ ಬದುಕು ಬೀದಿಗೆ ಬಂದಿದೆ. ನಮ್ಮನ್ನು ಕಾಯಂ ಮಾಡದಿದ್ದರೂ ನಮಗೆ ಬೇಸರವಿಲ್ಲ. ಹಿಂದಿನಂತೆ ನಮೂನೆ ಎಫ್​.ಎ.ಸಿ&63 ಪ್ರಕಾರ ಸಂಬಳ ನೀಡಲಿ ಎಂದು ಮನವಿ ಮಾಡಿದರು.

ನೌಕರರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಕರವೇ (ನಾರಾಯಣಗೌಡರ ಬಣ)ಯ ಜಿಲ್ಲಾಧ್ಯಕ್ಷ ಪುರುಷೋತ್ತಮ್​ ಗೌಡ ಮಾತನಾಡಿ, ದೊಡ್ಡಬಳ್ಳಾಪುರ ಅರಣ್ಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿಯ ಅಂಚಿನಲ್ಲಿರುವ ದಿನಗೂಲಿ ನೌಕರನ್ನು ಹೊರಗುತ್ತಿಗೆಯ ಶೂಲಕ್ಕೆ ಅರಣ್ಯ ಇಲಾಖೆ ಹಾಕುತ್ತಿದೆ. ಅವರನ್ನು ಕಾಯಂ ನೌಕರರನ್ನಾಗಿ ಪರಿಗಣಿಸಬೇಕು ಎಂದು ಅರಣ್ಯ ಸಚಿವ ಈಶ್ವರ್​ ಖಂಡ್ರೆ ಅವರಿಗೆ ಮನವಿ ಮಾಡುತ್ತೇವೆ. ಬೇಡಿಕೆ ಈಡೇರದಿದ್ದಲ್ಲಿ ಹೋರಾಟಕ್ಕೆ ಮುಂದಾಗುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net