ಹೊರಗುತ್ತಿಗೆ ನೌಕರರಿಗೆ ಸೌಲಭ್ಯ ದೊರಕಲಿ : ನ್ಯಾ.ರಾಜೇಶ್ ಹೊಸಮನೆ ಸಲಹೆ

BLY- 24-4
ಬಳ್ಳಾರಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅರಿವು ಕಾರ್ಯಾಗಾರವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.
Published on

ಬಳ್ಳಾರಿ : ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಶಾಸನಾತ್ಮಕ ಸೌಲಭ್ಯಗಳು ಮತ್ತು ಕನಿಷ್ಟ ವೇತನ ಕಾಯ್ದೆ ಪ್ರಕಾರ ವೇತನ, ಸೇವಾ ಭದ್ರತೆ ಮತ್ತಿತರ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವುದರಲ್ಲಿ ಆಯಾ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ನಿಗಮ, ಮಂಡಳಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ದೊರಕುವ ಶಾಸನಾತ್ಮಕ ಸೌಲಭ್ಯಗಳ ಕುರಿತು ಏರ್ಪಡಿಸಿದ್ದ ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ಬಹುತೇಕ ಕಚೇರಿಗಳು ಹೊರಗುತ್ತಿಗೆ ನೌಕರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಶಾಸನಬದ್ಧ ಸೌಲಭ್ಯ ಹಾಗೂ ನಿಯಮಾವಳಿ ಪ್ರಕಾರ ಕನಿಷ್ಟ ವೇತನ ಒದಗಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ ಎಂದರು.

ಕೆಲವೆಡೆ ಹೊರಗುತ್ತಿಗೆ ನೌಕರರಿಗೆ ಸಿಗಬೇಕಾದ ಸೌಲಭ್ಯಗಳನ್ನು ಗುತ್ತಿಗೆದಾರರು ನೀಡುತ್ತಿಲ್ಲ. ಗುತ್ತಿಗೆದಾರರು ಸೇವಾಶುಲ್ಕವನ್ನು ಮಾತ್ರ ಕಡಿತ ಮಾಡಬೇಕು. ಉಳಿದಂತೆ ನೌಕರರಿಗೆ ದೊರಕಬೇಕಾದ ಸೌಲಭ್ಯ ಒದಗಿಸಬೇಕು. ಸೇವಾಶುಲ್ಕ ಹೊರತುಪಡಿಸಿ ಇತರೆ ಯಾವುದೇ ಅನಧಿಕೃತ ವೇತನ ಕಡಿತವನ್ನು ಮಾಡುವಂತಿಲ್ಲ. ಅಧಿಕಾರಿಗಳು ಇದನ್ನು ಗಮನಿಸಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊರಗುತ್ತಿಗೆ ನೌಕರರರನ್ನು ಬಾಂಧವ್ಯದಿಂದ ಕಾಣಬೇಕು. ಅವರು ಕೂಡ ನಮ್ಮ ನೌಕರರು, ನಮ್ಮ ಸಿಬ್ಬಂದಿ ಎಂದು ಭಾವಿಸಬೇಕು. ಹೊರ ಗುತ್ತಿಗೆ ನೌಕರರ ವೇತನವು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಆಗುವಂತೆ ಹೊರ ಗುತ್ತಿಗೆ ನೀಡಿರುವ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತ ಎಸ್.ಎನ್.ರುದ್ರೇಶ್ ಅವರು ಮಾತನಾಡಿ, ಸರ್ಕಾರಕ್ಕೆ ಆರ್ಥಿಕ ಹೊರೆಯಾಗದಂತೆ ಹೊರಗುತ್ತಿಗೆ ನೌಕರರರನ್ನು ನೇಮಿಸಿಕೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿ ತಿಂಗಳು ನಿಗದಿಪಡಿಸಿದ ದಿನಾಂಕದೊಳಗೆ ವೇತನವನ್ನು ಬ್ಯಾಂಕ್ ಮೂಲಕ ಅವರ ಖಾತೆಗೆ ಜಮೆ ಮಾಡಬೇಕು. ವೇತನ ಚೀಟಿಯನ್ನು ಕಡ್ಡಾಯವಾಗಿ ನೀಡಬೇಕು. ಮುಖ್ಯವಾಗಿ ಮೊದಲ ಆದ್ಯತೆಯ ಮೇರೆಗೆ ವೇತನ ಪಾವತಿಯಾಗುವಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ವೀಣಾ.ಆರ್ ಅವರು ಮಾತನಾಡಿ, ಕನಿಷ್ಟ ವೇತನ, ತುಟ್ಟಿ ಭತ್ಯೆ ನೀಡಬೇಕು ಎಂಬುದು ಕನಿಷ್ಟ ವೇತನ ಕಾಯ್ದೆಯಲ್ಲಿದೆ. ಪ್ರತಿ ವರ್ಷ ಅದನ್ನು ಪರಿಷ್ಕರಣೆ ಮಾಡಿ ತುಟ್ಟಿ ಭತ್ಯೆಯನ್ನು ಸೇರಿಸಿ ವೇತನವನ್ನು ನೀಡಬೇಕು ಎಂದು ತಿಳಿಸಿದರು.

ನಂತರದಲ್ಲಿ ಹೊರಗುತ್ತಿಗೆ ನೌಕರರಿಗೆ ದೊರಕುವ ಶಾಸನಾತ್ಮಕ ಸೌಲಭ್ಯಗಳು, ಇಎಸ್‌ಐ, ಭವಿಷ್ಯ ನಿಧಿ ಮತ್ತಿತರ ಸೌಲಭ್ಯಗಳ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಯಿತು.

ಬಳ್ಳಾರಿ ಉಪ ವಿಭಾಗ ಕಾರ್ಮಿಕ ಅಧಿಕಾರಿ ಜಿ.ಇಬ್ರಾಹಿಂ, ಬಳ್ಳಾರಿ ಪ್ರಾದೇಶಕ ಭವಿಷ್ಯ ನಿಧಿ ಆಯುಕ್ತ ವೆಂಕಟಸುಬ್ಬಯ್ಯ, ಇಎಸ್‌ಐ ಕಾರ್ಪೋರೇಷನ್ ಶಾಖಾ ವ್ಯವಸ್ಥಾಪಕ ಮನ್ನೆ ರಾಜಕುಮಾರ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net