

ಮಂಡ್ಯ: ರಾಜ್ಯಸರ್ಕಾರದ ಬಜೆಟ್‌ನಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರಸಭೆ ಕಚೇರಿ ಎದುರು ಜಮಾಯಿಸಿದ ನೌಕರರು, ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ನೌಕರರ ಹೊರಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ಪೌರಕಾರ್ಮಿಕರ ಮಾದರಿಯಲ್ಲಿ ನೇರ ಪಾವತಿ ಜಾರಿಗೊಳಿಸುವಂತೆ ಆಗ್ರಹಿಸಿದರು.
ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಎಲ್ಲ ಪೌರಕಾರ್ಮಿಕರ ಹುದ್ದೆಯನ್ನು ಖಾಯಂಗೊಳಿಸುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿತ್ತು. ಆದರೆ ಪೌರಕಾರ್ಮಿಕರಲ್ಲಿಯೇ ತಾರತಮ್ಯ ಎಸಗಿರುವ ಸರ್ಕಾರ, ಕಸದ ವಾಹನ ಚಾಲಕರು ಮತ್ತು ನೀರು ಸರಬರಾಜು ಸಹಾಯಕರು ಸೇರಿದಂತೆ ಸಾವಿರಾರೂ ನೌಕರರಿಗೆ ಗುತ್ತಿಗೆ ಪದ್ಧತಿಯನ್ನೇ ಹೇರಿದೆ. ತೀವ್ರ ಹೋರಾಟದ ಪರಿಣಾಮ ಈ ಬಾರಿಯ ಬಜೆಟ್‌ನಲ್ಲಿ ನೇರಪಾವತಿ ಘೋಷಣೆ ಮಾಡುವ ವಿಶ್ವಾಸವಿತ್ತು. ಆದರೀಗ ಗುತ್ತಿಗೆ ಏಜೆನ್ಸಿಗಳ ಲಾಭಿಗೆ ಮಣಿದು ದ್ರೋಹವೆಸಗಿದೆ. ಕೂಡಲೇ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಕೆಲಸ ಬಹಿಷ್ಕರಿಸಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ, ದೀಪಕ್, ವಿಜಯ್ ಇತರರಿದ್ದರು.