

ಮಂಡ್ಯ: ಕನಿಷ್ಟ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಹಾಸ್ಟೆಲ್, ವಸತಿ ಶಾಲೆ-ಕಾಲೇಜುಗಳ ಹೊರಗುತ್ತಿಗೆ ನೌಕರರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ನೌಕರರು, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ರವಾನಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಅಡುಗೆ ಕೆಲಸದವರು, ಸ್ವಚ್ಛತೆ, ಕಾವಲು, ಅಟೆಂಡರ್, ಕಂಪ್ಯೂಟರ್ ಆಪರೇಟರ್, ಡೇಟಾ ಎಂಟ್ರಿ ಆಪರೇಟರ್, ಹೊರಗುತ್ತಿಗೆ ಶಿಕ್ಷಕರು, ದಿನಗೂಲಿ ನೌಕರರು ಯಾವುದೇ ಭದ್ರತೆ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಬೇಡಿಕೆ ಬಗ್ಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಜತೆಗೆ ಕರ್ತವ್ಯದ ಸಮಯದಲ್ಲಿ ಗುತ್ತಿಗೆದಾರರು, ವಾರ್ಡನ್, ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳ ಶೋಷಣೆ ಮಿತಿ ಮೀರಿದೆ. ಹೊರಗುತ್ತಿಗೆ ನೌಕರರ ಸಮಸ್ಯೆ ಬಗ್ಗೆ ಚರ್ಚಿಸಲು ತುರ್ತಾಗಿ ಸಭೆ ಕರೆಯುವಂತೆ ಒತ್ತಾಯಿಸಿದರು.
ಹೊರಗುತ್ತಿಗೆ ನೌಕರರಿಗೆ ಪ್ರತಿ ತಿಂಗಳು 31 ಸಾವಿರ ರೂ ಕನಿಷ್ಟ ವೇತನ ನೀಡಬೇಕು. ನೇರವಾಗಿ ಇಲಾಖೆಯಿಂದ ವೇತನ ಕೊಡಬೇಕು. ನಿವೃತ್ತಿಯಾಗುವರೆಗೂ ಸೇವಾ ಭದ್ರತೆ ನೀಡಬೇಕು. ಕಾರ್ಮಿಕ ಕಾನೂನು ಅನ್ವಯ ಕಡ್ಡಾಯವಾಗಿ ವಾರಕ್ಕೊಂದು ರಜೆ ನೀಡಬೇಕು. ಪ್ರತಿನಿತ್ಯ ಕೆಲಸದ ಸಮಯ ನಿಗದಿ ಮಾಡಬೇಕು. ಬೀದರ್ ಜಿಲ್ಲೆಯ ಮಾದರಿಯಲ್ಲಿ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘವನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಗುತ್ತಿಗೆದಾರರು ವೇತನದ ಚೀಟಿ, ನೇಮಕಾತಿ ಆದೇಶ ಪತ್ರ, ಗುರುತಿನ ಕಾರ್ಡ್, ಸರ್ವೀಸ್ ಸರ್ಟಿಫಿಕೇಟ್, ಇಎಸ್‌ಐ ಮತ್ತು ಪಿಎಫ್ ಹಣ ತುಂಬಿದ ರಶೀದಿ ಕೊಡಬೇಕು. ಹಿಂದುಳಿದ ವರ್ಗ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಸಿಬ್ಬಂದಿ ಸಂಖ್ಯೆ ಕಡಿತ ಮಾಡಿರುವ ಆದೇಶ ರದ್ದುಪಡಿಸಬೇಕು. 50 ವಿದ್ಯಾರ್ಥಿಗೆ ಮೂರು ಜನ ಸಿಬ್ಬಂದಿಯಂತೆ ಹಿಂದಿನ ಪದ್ಧತಿ ಮುಂದುವರಿಸಬೇಕು. ಪ್ರತಿ ತಿಂಗಳು ಐದನೇ ದಿನಾಂಕದೊಳಗೆ ವೇತನ ಪಾವತಿಸಬೇಕು. ಬಾಕಿ ವೇತನ ತುರ್ತು ನೀಡಬೇಕು. 10 ವರ್ಷ ಸೇವೆ ಸಲ್ಲಿಸಿರುವ ಹೊರಗುತ್ತಿಗೆ ಸಿಬ್ಬಂದಿಯನ್ನು ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದಡಿಯಲ್ಲಿ ತರಬೇಕು ಎಂದು ಆಗ್ರಹಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕೆಲಸ ಕಳೆದುಕೊಂಡಿರುವ ಹೊರಗುತ್ತಿಗೆ ಸಿಬ್ಬಂದಿಗಳನ್ನು ಮರು ನೇಮಕ ಮಾಡಿಕೊಳ್ಳಬೇಕು. ಹೊಸದಾಗಿ ಪ್ರಾರಂಭ ಮಾಡುವ ಹಾಸ್ಟೆಲ್‌ಗೆ ಕಡ್ಡಾಯವಾಗಿ ನೇಮಕಾತಿ ಮಾಡಿಕೊಳ್ಳಬೇಕು. ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಛತಾಗಾರರಿಂದ ಶೌಚಗೃಹ ಸ್ವಚ್ಛ ಮಾಡಿಸಬಾರದು. ವಸತಿ ಶಾಲೆ ಮತ್ತು ಹಾಸ್ಟೆಲ್‌ಗೆ ವಾರ್ಡನ್‌ಗಳು ಮಕ್ಕಳ ಅಡುಗೆಗೆ ಆಗತ್ಯವಾಗಿ ಬೇಕಾದ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಸರಿಯಾದ ಪ್ರಮಾಣದಲ್ಲಿ ತಂದು ಕೊಡಬೇಕು. ನಿವೃತ್ತಿ ನಂತರ ಜೀವನ ನಿರ್ವಹಣೆಗೆ ಹೊರಗುತ್ತಿಗೆ ನೌಕರರಿಗೆ 10 ಲಕ್ಷ ರೂ ಪರಿಹಾರ ಧನ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಹನುಮೇಗೌಡ, ಜಿಲ್ಲಾಧ್ಯಕ್ಷ ನಂಜುಂಡಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ, ಚಂದ್ರಶೇಖರ, ಆಶಾರಾಣಿ, ಇಂದ್ರಾಣಿ, ಎಂ.ಭೈರೇಗೌಡ, ಕೆ.ಜಿ.ಆಶಾ, ನಾಗಮ್ಮ, ಶ್ರೀಕಾಂತ್, ಸುನಂದಮ್ಮ, ತಾಯಮಣಿ ಇತರರಿದ್ದರು.