ಪ್ರತಿ ತಿಂಗಳು 5ರೊಳಗೆ ವೇತನ ಪಾವತಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

Outsourced employees grievance meeting Mandya
Published on

ಮಂಡ್ಯ: ಸಮಾಜ ಕಲ್ಯಾಣ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಹೊರಗುತ್ತಿಗೆ ಉದ್ಯೋಗಿಗಳಿಗೆ ಪ್ರತಿ ತಿಂಗಳು 5ರೊಳಗೆ ವೇತನವನ್ನು ಕಡ್ಡಾಯವಾಗಿ ನೀಡಬೇಕು. ತಡವಾದಲ್ಲಿ ಏಜೆನ್ಸಿಗಳ ವಿರುದ್ಧ ಕ್ರಮಕೈಗೊಂಡು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ವಿದ್ಯಾರ್ಥಿ ನಿಲಯಗಳ ಉದ್ಯೋಗಿಗಳ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿರುವ ಹಾಸ್ಟೆಲ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಏಜೆನ್ಸಿಗಳು ಪ್ರತಿ ತಿಂಗಳು ಸಂಬಳವನ್ನು ಸರಿಯಾಗಿ ನೀಡುತ್ತಿರುವ ಬಗ್ಗೆ ಅಧಿಕಾರಿಗಳು ಖಾತ್ರಿಪಡಿಸಿಕೊಂಡು ನಂತರ ಬಿಲ್ ಪಾವತಿ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಪ್ರತಿ ನೌಕರರಿಗೂ ಆರೋಗ್ಯ ವಿಮೆ ಮಾಡಿಸಲು ಕ್ರಮ ತೆಗೆದುಕೊಳ್ಳಬೇಕು. ಇದಲ್ಲದೆ ವೇತನ ಪಾವತಿ ನಂತರ ಪೇ ಸ್ಲಿಫ್, ಇಎಸ್‌ಐ ಮತ್ತು ಪಿಎಫ್ ಸೌಲಭ್ಯ ಕಲ್ಪಿಸಬೇಕು. ಇಎಸ್‌ಐ, ಪಿಎಫ್ ಹಣವನ್ನು ಪ್ರತಿ ತಿಂಗಳು ನೀಡುತ್ತಿರುವ ಬಗ್ಗೆ ಏಜೆನ್ಸಿ ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಳ್ಳಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿದ್ಧಲಿಂಗೇಶ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಮಂಜುಳಾ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಮಧುಶ್ರೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net