ಕರ್ತವ್ಯ ಸ್ಥಗಿತಗೊಳಿಸಿ ಹೊರಗುತ್ತಿಗೆ ಚಾಲಕರ ಪ್ರತಿಭಟನೆ

kstrc bus chalakar protest
Published on

ಮಡಿಕೇರಿ: ಸರಿಯಾದ ವೇತನ ಪಾವತಿಯಾಗದ ಹಿನ್ನೆಲೆ ಕರ್ತವ್ಯ ಸ್ಥಗಿತಗೊಳಿಸಿ ಕೆಎಸ್‌ಆರ್‌ಟಿಸಿಯ ೪೮ ಹೊರಗುತ್ತಿಗೆ ಚಾಲಕರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.


ಹೊರಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ ಬಸ್ ಚಾಲಕರು ಪೂಜ್ಯಾಯ ಸೆಕ್ಯುರಿಟಿ ಏಜೆನ್ಸಿ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಇದ್ದ ಏಜೆನ್ಸಿ ಪ್ರತಿ ತಿಂಗಳು ೨೩ ಸಾವಿರ ರೂ. ಸಂಬಳ ನೀಡುತ್ತಿತ್ತು. ಆದರೆ, ಈ ಏಜೆನ್ಸಿ ಬದಲಾಗಿದ್ದು ಪೂಜ್ಯಾಯ ಸೆಕ್ಯುರಿಟಿ ಏಜೆನ್ಸಿ ೧೩-೧೪ ಸಾವಿರ ರೂ. ಪಾವತಿಸುತ್ತಿದೆ. ಹಲವು ದಿನಗಳ ಬಳಿಕ ಒತ್ತಾಯದ ಬಳಿಕ ಅರ್ಧ ಸಂಬಳ ಪಾವತಿಸಿದ್ದಾರೆ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.


ಸಿಎಲ್ ರಜೆ ಕೊಡದ ಏಜೆನ್ಸಿ, ಯಾವುದೇ ಅಪಘಾತವಾದರೂ ಚಾಲಕರನ್ನೇ ಹೊಣೆ ಮಾಡುತ್ತಿದೆ. ಏಜೆನ್ಸಿ ಪೂರ್ಣ ಪ್ರಮಾಣದ ವೇತನ ಹಾಕುವವರೆಗೂ ಬಸ್ಸು ಸಂಚಾರ ಅರಂಭ ಮಾಡುವುದಿಲ್ಲ ಎಂದು ೪೮ ಬಸ್ಸು ಚಾಲಕರು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ದಿಢೀರ್ ಪ್ರತಿಭಟನೆಯಿಂದ ಕೊಡಗು ಜಿಲ್ಲೆಯ ಹಲವಾರು ಮಾರ್ಗಗಳಲ್ಲಿ ಸರ್ಕಾರಿ ಬಸ್ಸು ಸಂಚಾರ ಅಗದೇ ವ್ಯತ್ಯಯಗೊಂಡಿದೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಬಸ್ ಇಲ್ಲದೇ ಜನರು ಪರದಾಡುವಂತಾಯಿತು.


ಈ ಸಂದಭ ಮಾತನಾಡಿದ ಚಾಲಕ ಗಿರೀಶ್, ಈ ಹಿಂದೆ ಇದ್ದ ಏಜೆನ್ಸಿ ಉತ್ತಮ ವೇತನ ಜತೆಗೆ ಸರಿಯಾದ ಸಮಯಕ್ಕೆ ವೇತನ ಲಭ್ಯವಾಗುತ್ತಿತ್ತು. ಪ್ರಸ್ತುತವಿರುವ ಏಜೆನ್ಸಿಯಿಂದ ವೇತನ ಸರಿಯಾಗಿ ಬರುತ್ತಿಲ್ಲ. ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ರಾತ್ರಿಯೆಲ್ಲ ಬಸ್ ಚಾಲನೆ ಮಾಡಿ ವೇತನ ಇಲ್ಲ ಎಂದರೆ ನಮ್ಮ ಜೀವನ ಹೇಗೆ ಎಂದು ಪ್ರಶ್ನಿಸಿದ ಅವರು, ಇತ್ತೀಚೆಗೆ ಗೋಣಿಕೊಪ್ಪ ವ್ಯಾಪ್ತಿಯಲ್ಲಿ ಕೆಎಸ್‌ಆರ್‌ಟಿಸಿ ಚಾಲಕರೊಬ್ಬರಿಗೆ ಖಾಸಗಿ ಬಸ್‌ನವರು ಹಲ್ಲೆ ಮಾಡಿದ್ದಾರೆ. ಇದುವರೆಗೆ ಈಗಿನ ಏಜೆನ್ಸಿಯವರು ಏನಾಗಿದೆ ಎಂದು ವಿಚಾರಿಸಿಲ್ಲ ಎಂದು ಆರೋಪಿಸಿದರು.


ಈ ಸಂಬಂಧ ಮಡಿಕೇರಿ ಡೀಪೋ ಮ್ಯಾನೇಜರ್ ಮೆಹಬೂಬ್ ಮಾತನಾಡಿ, ಇದೇ ಮೊದಲ ಬಾರಿಗೆ ಪೂಜ್ಯಾಯ ಸೆಕ್ಯುರಿಟಿ ಏಜೆನ್ಸಿಯಿಂದ ವೇತನ ಹಾಕುವುದರಲ್ಲಿ ಕೊಂಚ ಗೊಂದಲವಾಗಿದೆ. ಕೆಲ ಚಾಲಕರು ಏಜೆನ್ಸಿ ಅವರಿಗೆ ಬ್ಯಾಂಕ್ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಕೊಟ್ಟಿಲ್ಲ. ಹೀಗಾಗಿ ಸ್ವಲ್ಪ ವೇತನ ಹಾಕಿದ್ದಾರೆ. ಅದನ್ನು ಸರಿಪಡಿಸುವ ಕೆಲಸವಾಗುತ್ತಿದೆ. ೩೦ ರೂಟ್‌ಗಳಲ್ಲಿ ಬಸ್ ಇಳಿಸಿದ್ದೇವೆ. ಶಾಲಾ ಮಕ್ಕಳಿಗೆ, ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಕರ್ತವ್ಯಕ್ಕೆ ಹಾಜರಾಗಿ ಎಂದು ನಾವು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.


ಪ್ರತಿಭಟನೆಯಲ್ಲಿ ಚಾಲಕರಾದ ಮಂಜುನಾಥ್, ಮಹದೇವ್, ದೇವರಾಜ್, ವೆಂಕಟೇಶ್ ಸೇರಿದಂತೆ ಇತರ ಚಾಲಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net